ಆ ಅಜ್ಜ, ಈ ಹುಡುಗಿ

0
43

ತೇಜಶ್ರೀ

ಆ ಹುಡುಗಿಗೆ ಹನ್ನೊಂದು ತುಂಬಿ ಹನ್ನೆರಡರ ಪ್ರಾಯ. ಕನಸುಗಳು ಪೊರೆ ಹರಿದು ಹೊರಬರಲು ಹವಣಿಸುತ್ತಿದ್ದ ಕಾಲವದು. ವಸಂತ ಮಾಸ. ಬಯಕೆಗಳು ಉಮ್ಮಳಿಸುವ ಸಮಯವೂ ಇದು. ಹೊಸ ಉಮೇದಲ್ಲಿ ಜಗತ್ತನ್ನು ನೋಡುವ ಹೊತ್ತು. ದೇಹಕ್ಕಷ್ಟೇ ಆತುಕೊಂಡ ಪುಳಕಗಳು ಸಿಪ್ಪೆ ಕಳಚಿ ತಿರುಳಿನ ರುಚಿಯಲ್ಲಿ ಬಯಕೆಯನ್ನು ಮಿದ್ದುವ, ಮೆಲ್ಲುವ ಸೊಗಸಿನ ವೇಳೆ.
ಅಪ್ಪ ಸ್ನೇಹಿತರೊಬ್ಬರ ಬಜಾಜ್ ಸ್ಕೂಟರ್ ತಂದಿದ್ದರು, ನೀಲಿಬಣ್ಣ. ಅವಳು ಆ ದಿನ ತೊಟ್ಟಿದ್ದ ಹೊಸ ಬಿಳಿ, ನೀಲಿ ಬಣ್ಣದ ಚೂಡಿದಾರ್‍ಗೂ ಸ್ಕೂಟರ್‍ಗೂ ಹೊಂದುತ್ತಿತ್ತು. ಕುಕ್ಕರಹಳ್ಳಿ ಕೆರೆಯ ಪಕ್ಕದ ರಸ್ತೆಯಲ್ಲಿ ಹಾದು ಸ್ಕೂಟರು ಒತ್ತೊತ್ತಾಗಿ ಬೆಳೆದ ಗಿಡಮರಗಳ ಜಾಗವನ್ನು ಹೊಕ್ಕಾಗಲೇ ಅಪ್ಪ, ‘ನೋಡು ಇದು ಮಾನಸಗಂಗೋತ್ರಿ ಅಂತ, ಉನ್ನತ ಅಧ್ಯಯನ ಇಲ್ಲೇ ಮಾಡೋದು… ಕುವೆಂಪು, ಎಲ್.ಬಸವರಾಜು ಅವರಂತ ದೊಡ್ಡ ಮನುಷ್ಯರು ನಡೆದಾಡಿದ ರಸ್ತೆಗಳು ಇವೆಲ್ಲ… ನೋಡಿದು ಗ್ರಂಥಾಲಯ, ನೋಡು.. ನೋಡು.. ಅದು ಕನ್ನಡ ಅಧ್ಯಯನ ಸಂಸ್ಥೆ. ನೀನು ಇಲ್ಲೇ ಓದಬೇಕು ಅಂತ ನನ್ನಾಸೆ…’ ಎಂದಿದ್ದ. ಹುಡುಗಿ ಮನಸ್ಸಿನೊಳಗೆ ಅಪ್ಪ ಹೇಳಿದ ಎಲ್ಲವೂ ಒಂದರೊಳಗೊಂದು ಕಲಸಿಕೊಂಡು ಸುಮ್ಮನೆ ದಾರಿ ಸಾಗಿ ಕಡೆಗೆ ಸ್ಕೂಟರ್ ಒಂದು ಮನೆಯ ಮುಂದೆ ನಿಂತಿತು. ಆ ಮನೆಗೆ ದೊಡ್ಡ ಹೂದೋಟ, ಥರಾವರಿ ಗಿಡಮರಗಳು. ಅಲ್ಲಿನ ದೈತ್ಯ ಮರವೊಂದರಿಂದ ಕೋಗಿಲೆಯ ಕೂಗು. ಆ ದನಿಗೆ ಗೇಟಿನ ಬಳಿಯ ಬಳ್ಳಿಯಿಂದ ಹೂಗೊಂಚಲು ತಲೆದೂಗಿದಂತೆ. ತಿಳಿವು ಅಲ್ಲಿನ ಗಾಳಿಯೊಳಗೆ ಕಲೆತಂತೆ ಮರದಿಂದ ಮತ್ತೊಮ್ಮೆ ಕೂಗು. ಇನ್ನೆಲ್ಲೋ ಕೋಗಿಲೆಯ ಮರುದನಿ. ಹೂದೋಟದ ಹಾದಿಯಲ್ಲಿ ಏನೇನೋ ಪೊದೆಹೂವು!

ಆಪ್ತವಾಗಿ ಕರೆಯುವ ಮುಖಭಾವದ ಮನೆ ಅದು. ಅದಕ್ಕೆ ಅದರದ್ದೇ ಠೀವಿ. ಕರೆಗಂಟೆ ಸದ್ದಿಗೆ ಬಾಗಿಲು ತೆಗೆದ ಹೆಣ್ಣುಮಗಳು ‘ಓ ಬನ್ನಿ ಕೂತ್ಕೊಳಿ, ಅಣ್ಣಂಗೆ ಹೇಳ್ತಿನಿ’ ಎಂದು ಪ್ರೀತಿಯಿಂದ ಕರೆದರು. ಅಲ್ಲೆಲ್ಲೂ ಸಣ್ಣ ಶಬ್ದವೂ ಇಲ್ಲ. ವಿಶಾಲ ನಡುಮನೆ. ಕೆಂಪು ನೆಲ. ಥಳಥಳ ಹೊಳೆವ ನೆಲದಲ್ಲಿ ಆ ಹುಡುಗಿ ತನ್ನ ಮುಖವನ್ನು ನೋಡಿಕೊಳ್ಳುತ್ತಿರುವಾಗಲೇ ಬಾಗಿಲು ತೆರೆದ ಹೆಣ್ಣುಮಗಳು ‘ಬನ್ನಿ’ ಎಂದು ಕೋಣೆಯೊಂದರ ಕಡೆ ತೋರಿಸಿದರು. ಅಲ್ಲಿನ ಮೌನಕ್ಕೆ ಬೆದರಿದಂತಿದ್ದ ಹುಡುಗಿ ಸರಬರ ಸದ್ದು ಮಾಡುತ್ತಿದ್ದ ತನ್ನ ಚೂಡಿದಾರನ್ನು ಎರಡೂ ಕೈಯಲ್ಲಿ ಬಿಗಿಹಿಡಿದು ಸದ್ದಿನ ಉಸಿರು ಮುಚ್ಚಿಸುವ ವ್ಯರ್ಥ ಪ್ರಯತ್ನ ಮಾಡುತ್ತ ತನ್ನಪ್ಪನ ಹಿಂದುಗುಟ್ಟಿ ಕೋಣೆಯೊಳಗೆ ಹೋದಳು. ದೊಡ್ಡ ಕೋಣೆ. ಅದರ ಒಂದು ಬದಿಗೆ ಪುರಾತನೆಯನ್ನು ನೆನಪಿಸುವಂತಹ ವಿಶಾಲ ಮೇಜು. ಕೋಣೆಯೇ ಪುಸ್ತಕದ ಹೇರಡವಿ. ಅಗರಬತ್ತಿಯ ಮೃದು ಸುಗಂಧ ಇದ್ದೂ ಇಲ್ಲದ ಹಾಗೆ ಅಲ್ಲೆಲ್ಲ. ಆ ಸುಗಂಧದ ಸಂಗದಲ್ಲಿ ಹುಡುಗಿಗೆ ತನಗೆ ತಾನು ಶುಭ್ರವೆನಿಸಿತು. ಮೇಜಿನ ಪಕ್ಕದ ಮರದ ಕುರ್ಚಿಯ ಮೇಲೆ ಒಬ್ಬ ಅಜ್ಜ. ಅದು ಅದೇ ಅಜ್ಜ! ಅವಳಿಗೆ ಥಟ್ಟನೆ ನೆನಪಾಯಿತು: ಹಾಸನದ ತನ್ನ ಮನೆಯ ಗೋಡೆಯ ಮೇಲೆ ನಗುತ್ತ ನೆಲೆಯೂರಿದ್ದ ಅಜ್ಜ. ಅದೇ ಬಿಳಿ ಮೇಲಂಗಿ, ಬಿಳಿ ಪೈಜಾಮ, ಬಯ್ತಲೆ ತೆಗೆದ ಬಿಳಿ ತಲೆಗೂದಲು, ನೀಳಮೂಗು, ಮುಗ್ಧಕಣ್ಣು, ಮಗುವಿನಂತ ನಗುವಿನ ಅಜ್ಜ!

ಅಪ್ಪನನ್ನು ನೋಡಿದ್ದೆ ‘ಓ ಬನ್ನಿ ಬನ್ನಿ’ ಎಂದು ತುಂಬುಪ್ರೀತಿಯಿಂದ ಕರೆದು ಕೈಕುಲುಕಿ ಎದುರಿಗಿದ್ದ ಕುರ್ಚಿಯಲ್ಲಿ ಕೂರುವಂತೆ ತೋರಿಸಿದರು. ‘ಇವಳು ನನ್ನ ಮಗಳು’ ಅಪ್ಪ ಅಂದ. ಕಣ್ಣೆವೆ ಪಿಳುಕಿಸದೆ ನೋಡುತ್ತಿದ್ದ ಹುಡುಗಿಗೆ ಅಜ್ಜ ‘ಬಾ ತಾಯಿ’ ಎಂದರು. ಮುಖದಲ್ಲಿ ಪ್ರೀತಿಯ ನಗು. ಅಜ್ಜನ ಮೈ, ಮುಖದ ತೇಜಸ್ಸು ಮಾಯಾಕಿನ್ನರಿಯಂತೆ ಆ ಹುಡುಗಿಯನ್ನು ಸೆಳೆದುಕೊಂಡು, ಅವಳಿಗೆ ಅಪ್ಪ ಮತ್ತು ಅಜ್ಜ ಆಡಿಕೊಂಡ ಮಾತುಗಳೊಂದೂ ಕಿವಿಗೆ ಹೋಗುತ್ತಿಲ್ಲ. ಎಷ್ಟು ಹೊತ್ತು ಸರಿಯಿತೋ… ಅಪ್ಪ, ‘ಸರ್, ಇವಳು ಚೆನ್ನಾಗಿ ಹಾಡ್ತಾಳೆ. ನಿಮ್ಮ ಗೀತೆಯನ್ನ ಹಲವಾರು ಕಡೆ ಹಾಡಿದ್ದಾಳೆ’ ಅಂದು ಭುಜ ಮುಟ್ಟಿದಾಗಲೆ ಎಚ್ಚರ. ‘ಹೌದಾ..!? ಒಂದೂ ತಪ್ಪಿಲ್ಲದೆ ಹಾಡ್ತಿಯ?’ ಅಜ್ಜನ ಮಾತಲ್ಲಿ ಸವಾಲು, ಆಶ್ಚರ್ಯ ಎರಡೂ. ಅದನ್ನು ಸ್ವೀಕರಿಸಿದಂತೆ ಹುಡುಗಿ ತಲೆ ಅಲ್ಲಾಡಿಸಿ ಹಾಡಿದಳು. ಗೀತೆ ಶುರುವಾದಾಗ ಕಣ್ಮುಚ್ಚಿ ಧ್ಯಾನಮಗ್ನರಾದ ಅಜ್ಜನ ಮುಖದಲ್ಲಿ ಹೊಸದೇನನ್ನೋ ಕೇಳುತ್ತಿದ್ದ ಸ್ಥಿತಭಾವ. ಹಾಡು ಮುಗಿದು, ಕಣ್ಣು ತೆರೆದ ಅಜ್ಜ, ಹುಡುಗಿಯ ಕಣ್ಣನ್ನೇ ನೋಡುತ್ತ, ‘ಒಂದೂ ತಪ್ಪಿಲ್ಲದೆ ಹಾಡಿದೆ. ‘ಓ ನನ್ನ ಚೇತನ ಆಗು ನೀ ಅನಿಕೇತನ’ ಅಂತ ನೀನು ಬೇರೆ ಯಾರಿಗೂ ಹೇಳುತ್ತಿಲ್ಲ. ನಿನ್ನ ಚೇತನಕ್ಕೆ ನೀನೇ ಹೇಳುತ್ತಿರುವುದು. ನಿನ್ನ ಚೇತನ ಅನಿಕೇತನ ಆಗಬೇಕು. ಆಗು, ಆಗು, ಆಗು, ಆಗು’ ಎಂದು ಹುಡುಗಿಯ ತಲೆ ನೇವರಿಸಿದರು.
ಒಂದು ಸ್ಪರ್ಶದಲ್ಲಿ ಏನೆಲ್ಲ!

ಆ ಗೀತೆಯನ್ನು ಅವಳು ಇಲ್ಲಿಯವರೆಗೆ ಎಷ್ಟೋ ಸಾರ್ತಿ ಹಾಡಿದ್ದಳು ಆದರೆ ಎಂದೂ ತನಗಾಗಿ ಹಾಡಿಕೊಂಡಿರಲಿಲ್ಲ ಎಂಬುದನ್ನು ಅಜ್ಜನ ಸಾನಿಧ್ಯ ತೋರಿಸಿದ್ದೇ… ಅಲ್ಲಿಂದ ಅವಳು ತನಗೆ ತಾನು ಹಾಡಿಕೊಳ್ಳಲು ಶುರುಮಾಡಿದಳು. ಅಜ್ಜನ ಸ್ಪರ್ಶವು ಕವಿತೆ, ಕತೆ ಇನ್ನೂ ಏನೇನೋ ಆಗಿ ಆ ಹುಡುಗಿಯೊಳಗೆ ಬೆಳೆಯತೊಡಗಿ ಒಡಲಲ್ಲಿ ಒದೆಯುವ ಕೂಸನ್ನು ಸುಖದಲ್ಲಿ ಹೊತ್ತಂತೆ ತಾಯಿ, ಹೊತ್ತಂತೆ ಬೆಳಕನ್ನು ಕತ್ತಲೆಯು, ಹೊತ್ತಿತು ಅಜ್ಜನ ಸಾನಿಧ್ಯ ಆ ಹುಡುಗಿಯನ್ನು.

ಎಲ್ಲವುದೂ ಎಷ್ಟು ಬೇಗ ನಡೆದುಹೋಯಿತು.. ಅಥವಾ ನನಗದು ಹಾಗೆ ಕಾಣುತ್ತಿದೆಯೇ? ಎಂದು ಯೋಚಿಸುತ್ತಾಳೆ ಹುಡುಗಿ, ಈಗ ಇದನ್ನೆಲ್ಲ ನೆನೆದು ಈ ಕವಿತೆ ಬರೆಯುವಾಗಲೂ!

ಗರ್ಭಗುಡಿಯೊಳಗೆ
ಅರೆಗತ್ತಲಿನ ಪರಿಧಿಯೊಳಗೆ
ಸೋರಿದ ಸೊಡರಿನೆಣ್ಣೆಯಿಂದ ನೆಟ್ಟ ಕಲ್ಲುಕಂಬಗಳೆಲ್ಲ ಇನ್ನೂ ಕಪ್ಪಾಗಿ,
ವಿಗ್ರಹದ ಪ್ರಭಾವಳಿಯ ಬೆಳಕಕೋಲು ಚಾಚಿ ಮೂಲೆಮೂಲೆಗೂ
ಅಲ್ಲಿ ಸಮೃದ್ಧ ಪ್ರಭೆ.

ಪ್ರಮತ್ತ ಕತ್ತಲನು ಕಂಡು ನಗುವಂತ ನಿಮೀಲಿತ ಕಣ್ಣಿನ ವಿಗ್ರಹ,
ರಹಸ್ಯಗಳ ಬಿಟ್ಟುಕೊಡದ ಮುದ್ದುನಗು,
ಕ್ಷೀರಪಥದ ಚುಕ್ಕೆಗಳಂತೆ ಥಳಕ್ಕು ಪುಳಕ್ಕು ಹೊಳೆಯುತ್ತವೆ ಒಡವೆ ವಸ್ತ್ರ.

ಕೋರಯಿಸಿ ಲೋಕದ ಬೆಳಕಿಗೆ
ಕುರುಡಾಗುವ ಬುದ್ಧಿಯನು ಕಾಪಿಡುತ್ತದೆ
ಗುಡಿಯೊಳಗಿನ ಕತ್ತಲೆಂಬ ತಾಗುದಾಣ:
ಕತ್ತಲು-ಬೆಳಕಿನ ಈ ಆಟವೇ ಜೀವಜೀವದ ಸಂಬಂಧವೆನಿಸುವಂತೆ ಮಾಡುತ್ತ
ಹೀಗೆ ಎಂಬಂತೆ ಹೊಳೆಯಿಸಿ ಅರಿವನ್ನು ಆ ಗರ್ಭಗತ್ತಲು
ತಡವಿ ಜೀವವನು ಹೊರಕ್ಕೆ ಬಿಡುತ್ತ.

ಕಣವೊಂದು ಜೀವವಾಗಿ, ಕಲ್ಲಿಂದ ಮೂರ್ತಿ ಮೂಡಿ ಬೆಳೆವ ಬೆರಗು
ನೋಡುವ ಕಣ್ಣಲ್ಲಿ ಉಳಿದು,
ಕೆತ್ತಿದ ಶಿಲ್ಪಿ, ಕೆತ್ತಿಸಿದ ಸ್ಫೂರ್ತಿ
ಏಕತ್ರ ಕರಗುತ್ತಾರೆ ಭಂಜಿಕೆಯೊಳಗೆ.