ಇಂತಹ ಮೇಷ್ಟ್ರು ನಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ಸಿಗಲಿ

0
81

 

 

 

 

 

 

-ಪ್ರೊ.ಎಂ.ಕೃಷ್ಣೇಗೌಡ

ಅವರ ಹೆಸರು ಬಿ.ಎಚ್.ಜಯರಾಜು. ನನ್ನ ಬಾಲ್ಯಕಾಲದ ಮೇಷ್ಟ್ರು. ಒಳ್ಳೆ ಆಜಾನುಬಾಹು, ಧೀರ ನಡಿಗೆ, ಕಂಚು ಬಡಿದಂತೆ ದನಿ. ತಪ್ಪು ಮಾಡಿದ ಹುಡುಗನ ಕಡೆ ತಟಕ್ಕನೆ ತಿರುಗಿ ’ಎಲಾ ಮಾರ್ಜಾಲ!’ ಅಂತ ಒಂದು ಸಾರಿ ದೊಡ್ಡ ದನಿಯಲ್ಲಿ ಅಬ್ಬರಿಸಿದರೆ ಎಂಥ ಭಂಡ ಹುಡುಗನ ಎದೆಯಲ್ಲೂ ಬೆವರು ಕಿತ್ತುಕೊಳ್ಳಬೇಕು. ಅದೇ ಒಬ್ಬ ಹುಡುಗ ಒಂದು ಪದ್ಯವನ್ನೋ ಪಾಠವನ್ನೋ ಚೆನ್ನಾಗಿ ಓದಿಬಿಟ್ಟರೆ ’ಅಲೆಲೆಲೆಲೆಲೆ ನನ್ನ ಮುದ್ದು ಕೂಸೇ’ ಅಂತ ತೊಡೆಯ ಮೇಲೆ ಕೂರಿಸಿಕೊಂಡು, ಎದೆಗೊತ್ತಿಕೊಂಡು ಮುದ್ದಾಡಿಬಿಡೋರು. ಅವರು ನಮ್ಮೂರಿನ ಸರ್ಕಾರಿ ಶಾಲೆಯ ಹೆಡ್ಮಾಸ್ಟರಾಗಿದ್ದರು.

ಜಯರಾಜ್ ಮೇಷ್ಟ್ರು ಚೆನ್ನಾಗಿ ಹಾರ್ಮೋನಿಯಂ ನುಡಿಸೋರು, ಸೊಗಸಾಗಿ ಹಾಡೋರು. ಅಷ್ಟು ಮಾತ್ರವಲ್ಲ, ನಮ್ಮೂರಿನಲ್ಲಿ ಅವರು ’ಸತ್ಯ ಹರಿಶ್ಚಂದ್ರ’ ನಾಟಕವನ್ನೂ ಕಲಿಸಿ ಆಡಿಸಿದ್ದರು. ಅದೆಲ್ಲಾ ನನಗೆ ಮಸುಕು ಮಸುಕು ನೆನಪು ಅಷ್ಟೆ. ಆಗ ನಾನಿನ್ನೂ ಅಷ್ಟು ಚಿಕ್ಕವನು. ಅವರು ನಮ್ಮೂರಿನಲ್ಲಿ ಹದಿಮೂರೋ ಹದಿನಾಲ್ಕೋ ವರ್ಷ ಮೇಷ್ಟ್ರಾಗಿದ್ದರಂತೆ. ಅವರೇನೂ ಒಕ್ಕಲಿಗರೋ, ಬ್ರಾಹ್ಮಣರೋ ಅಲ್ಲ. ಹರಿಜನ ಕೋಮಿನವರು. ಆದರೂ ನಮ್ಮೂರಿನ ಜನ ಜಯರಾಜ್ ಮೇಷ್ಟ್ರು ಎದುರಾದರೆ ಎರಡೂ ಕೈ ಮುಗಿದು ’ನಂಸ್ಕಾರ ಮೇಷ್ಟ್ರೇ’ ಅನ್ನೋರು. ಆಗ ಮೇಷ್ಟ್ರು ತಮ್ಮ ಜೋರು ನಗುವಿನ ಮಧ್ಯೆಯೇ ’ಅಲೆಲೆಲೆಲೆ ಚನ್ನೇಗೌಡಾ ರಾಮೇಗೌಡಾ, ಅಂಕೇಗೌಡಾ ಚನ್ನಾಗಿದ್ದೀಯಾ? ಮನೇಲೆಲ್ಲಾ ಚೆನ್ನಾಗಿದ್ದಾರಾ? ಆವತ್ತು ನೀನು ಹಲಸ್ನಣ್ಣು ಕೊಟ್ಟು ಕಳಿಸಿದ್ದಲ್ಲಾ, ಪರಮಾಯಿಷಿಯಾಗಿತ್ತು ಕಣಪ್ಪಾ. ಮೊನ್ನೆ ತಾಯಮ್ಮ ಗಿಣ್ಣುಹಾಲು ಕೊಟ್ಟು ಕಳಿಸಿದ್ಲು, ಹಸು ಈಯ್ತಾ? ಎಂಥಾ ಕರು? ನೆನ್ನೆ ನಿನ್ ಮಗ ಶಿವು ಸ್ಕೂಲಿಗೆ ಬಂದಿಲ್ಲ. ಹಂಗೆಲ್ಲ ತಪ್ಪುಸ್ಕೋಬಾರ್ದು ಸ್ಕೂಲಿಗೆ ಕಳಿಸು. ಅಲ್ಲ, ನೀನು ಬುದ್ಧಿವಂತ. ನಿನಗೆ ಹೇಳ್ಬೇಕಾ ನಾನು?…’ ಹೀಗೆಲ್ಲಾ ಬಾಯ್ತುಂಬಾ ಮಾತಾಡಿಸೋರು.

ಈಗೊಂದೈದಾರು ತಿಂಗಳ ಹಿಂದೆ ನನ್ನ ವಾಟ್ಸಾಪಿನ ಅಂಕಣಕ್ಕೆ ಒಂದು ಉತ್ತರ ಕ್ರಿಯಾದಿ ಕಾರ್ಡು ಬಂದು ಬಿದ್ದಿತ್ತು. ತೆರೆದು ಓದಿದೆ. ಜಯರಾಜ್ ಮೇಷ್ಟ್ರು ತೀರಿಕೊಂಡಿದ್ದರಂತೆ. ಅವರ ಉತ್ತರ ಕ್ರಿಯೆಯ ಕಾರ್ಡು ಅದು. ಓದಿದ ಕೂಡಲೇ ಹೊಟ್ಟೆ ಕಲಸಿದಂತಾಯಿತು. ಕಣ್ಣುಗಳಲ್ಲಿ ಫಳ್ಳಂತ ನೀರು! ಕಣ್ಣೊರೆಸಿಕೊಂಡು ಕಾರ್ಡಿನಲ್ಲಿ ಮುದ್ರಿತವಾಗಿದ್ದ ಅವರ ಚಿತ್ರ ನೋಡಿದೆ. ಅವರ ವೃದ್ಧಾಪ್ಯದಲ್ಲಿ ತೆಗೆಸಿರುವ ಚಿತ್ರ ಅದು. ಕೃಶ ಶರೀರ, ಬಿಳಿಗೂದಲು. ನನ್ನ ಮನಸ್ಸು ಅರ್ಧ ಶತಮಾನದ ಹಿಂದಕ್ಕೆ ಫೇರಿ ಕಿತ್ತಿತು. ನಮ್ಮ ಊರು, ನಮ್ಮ ’ಇಸ್ಕೂಲು ಮನೆ’, ಜಯರಾಜ್ ಮೇಷ್ಟ್ರು, ಮಾದಯ್ಯ ಮೇಷ್ಟ್ರು, ಧರ್ಮರಾಜ್ ಮೇಷ್ಟ್ರು, ಸಿಂಗ್ರೀಗೌಡ್ರು, ನಾಗರಾಜ್ ಮೇಷ್ಟ್ರು, ಚಿತ್ರಗೀತಾ ಮೇಡಮ್ಮು… ನನ್ನ ಮನಃಪಟಲದ ಮೇಲೆ ಇವರೆಲ್ಲರ ಮೆರವಣಿಗೆ.

ಇದು ಹೀಗೆ ನಡೆಯುತ್ತಿರುವಾಗಲೇ ಜಯರಾಜ್ ಮೇಷ್ಟ್ರು ಮೊಮ್ಮಗ ನನಗೆ ಫೋನು ಮಾಡಿದ. ತಾತ ತೀರಿಕೊಂಡ ವಿಷಯ ಹೇಳಿದ. ನಿಮ್ಮೂರನ್ನು ಬಹಳ ನೆನಪಿಸಿಕೊಳ್ಳೋರು ಅಂದ. ನೀವು ಟಿವಿಯಲ್ಲಿ ಬಂದರೆ ತಾತ ’ಲೆಲೆಲೆಲೆಲೆ ಕೃಷ್ಣೇಗೌಡ, ಇವ್ನು ನನ್ನ್ ಶಿಷ್ಯ ಕಣ್ರೋ, ನನ್ನ್ ತೊಡೆ ಮೇಲೆ ಬೆಳೆದ ಹುಡುಗ ಕಣ್ರೋ’ ಅಂತ ಹೆಳ್ಕೊಂಡು ಎದೆ ತಟ್ಟಿಕೊಳ್ಳೋರು ಸಾರ್’ ಅಂದ. ಅವರು ನಾನು ಕಾಲೇಜು ಪ್ರಿನ್ಸಿಪಾಲನಾದ ಮೇಲೆ ನನ್ನನ್ನು ಹುಡುಕಿಕೊಂಡು ಕಾಲೇಜಿನ ಹತ್ತಿರ ಬಂದಿದ್ದರು. ನನ್ನನ್ನು ಬಿಗಿಯಾಗಿ ಅಪ್ಪಿಕೊಂಡು, ಬೆನ್ನಿನ ಮೇಲೆ ಗುದ್ದಿ, ಕಣ್ಣೀರು ತುಂಬಿಕೊಂಡು ನಿಂತಿದ್ದರು. ನಾನು ಬಗ್ಗಿ ಅವರ ಪಾದಮುಟ್ಟಿ ನಮಸ್ಕಾರ ಮಾಡಿದೆ. ಮೇಷ್ಟ್ರಿಗೆ ಕಂಠ ಬಿಗಿದುಕೊಂಡಿತ್ತು. ’ಸಂತೋಷ ಕಣಪ್ಪ,,, ಸಂತೋಷ ಕಣಪ್ಪ,,,, ’ ಅಂತ ತಡೆತಡೆದು ಮಾತನಾಡಿದರು. ಒಂದೈದಾರು ನಿಮಿಷ ನನ್ನ ಅವರ ಕಣ್ಣೀರಿನಾಟ ಮುಗಿದ ಮೇಲೆ ಎದೆ ತಿಳಿಯಾಯಿತು. ನಮ್ಮ ಕಾಲೇಜಿನ ಆವರಣದ ಕಲ್ಲುಬೆಂಚಿನ ಮೇಲೆ ಕುಳಿತುಕೊಂಡು ಒಂದು ರಾಶಿ ಮಾತನಾಡಿದೆವು. ಎಲ್ಲಾ ಬರೀ ಭೂತಕಾಲದ ಕತೆಯೇ. ಆ ವಯಸ್ಸಿನಲ್ಲಿ ಅವರು ಮಾತಾಡುವುದಕ್ಕೆ ಅವರಿಗ್ಯಾವ ಭವಿಷ್ಯವಿತ್ತು? ಇದ್ದದ್ದು ಬರೀ ಭೂತಕಾಲವಷ್ಟೆ. ಆಮೇಲೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಬಸ್‌ಸ್ಟ್ಯಾಂಡಿಗೆ ಹೋಗಿ ಅವರೂರಿಗೆ ಬಸ್ಸು ಹತ್ತಿಸಿ ಬಂದೆ.

******

ಯಾಕೆ ಅಂತ ಗೊತ್ತಿಲ್ಲ. ಶಿಕ್ಷಕರ ದಿನದ ಸಂದರ್ಭಕ್ಕೆ ಏನಾದರೂ ಬರೆಯಬೇಕೆಂದಾಗ ನನ್ನ ಮನಸ್ಸಿನ ತುಂಬಾ ಒತ್ತರಿಸಿಕೊಂಡು ಬಂದವರು ನಮ್ಮ ಜಯರಾಜ್ ಮೇಷ್ಟ್ರು. ಆ ಮೇಷ್ಟ್ರು ಈಗಿಲ್ಲ. ಆದರೆ ನನ್ನಂಥ ಎಷ್ಟೋ ಅವರ ಪದತಲದಲ್ಲಿ ಕಲಿತ ವಿದ್ಯಾರ್ಥಿಗಳ ಬದುಕಿನಲ್ಲಿ, ನೆನಪಿನಲ್ಲಿ ಅವರು ಜೀವಂತ ಇದ್ದಾರೆ. ಇಂಥ ಎಷ್ಟೋ ಜನ ಮೇಷ್ಟ್ರು ನನಗೆ ಕಲಿಸಿದ್ದಾರೆ, ತಿದ್ದಿದ್ದಾರೆ, ನನ್ನನ್ನು ಕಡೆದಿದ್ದಾರೆ. ಶಿಕ್ಷಕರ ದಿನದಂದು ನನಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಲಿಸಿದ ಎಲ್ಲಾ ನನ್ನ ಮೇಷ್ಟ್ರುಗಳಿಗೂ ಒಂದು ಪ್ರೀತಿಯ ನಮಸ್ಕಾರ.
ನಮಗೆ ಪಾಠ ಹೇಳಿದ ಜಯರಾಜ್ ಮೇಷ್ಟ್ರು ಈಗ ಸತ್ತು ಸಂಪಿಗೆ ಮರವಾಗಿದ್ದಾರೆ. ಅವರು ಬದುಕಿದ್ದಾಗ ಈ ಪ್ರಶ್ನೆಗಳು ಇರಲಿಲ್ಲ. ಈಗ ಇಂಥ ಪ್ರಶ್ನೆಗಳು ನಮ್ಮನ್ನು ಹೆಡೆಯೆತ್ತಿ ಎದುರಿಸುತ್ತಿವೆ. ಶಿಕ್ಷಕರ ದಿನದ ಹರಕೆ ಇಷ್ಟೇ. ನಮಗೆ ಮೇಷ್ಟರಿದ್ದಂತೆ ನಮ್ಮ ಮಕ್ಕಳಿಗೂ ಇರಲಿ, ಮೊಮ್ಮಕ್ಕಳಿಗೂ ಇರಲಿ, ಮರಿಮಕ್ಕಳಿಗೂ ಇರಲಿ. ಮೇಷ್ಟ್ರು ಸದಾ ಇರಲಿ.