ಗುಂಡುಗುಂಡಾಗಿರುವ ಮುದ್ದು ಗಣಪನ ನೆನೆದು ಚೌತಿಯ ಹೊತ್ತಿಗೊಂದು ವಿನಾಯಕ ಪ್ರೀತಿ

0
26

ಅನುರಾಧಾ ಸಾಮಗ
apsamaga@gmail.com

“ಭಾದ್ರಪದ ಶುಕ್ಲದಾ ಚೌತಿಯಂದೂ ಚಂದಿರನ ನೋಡಿದರೆ ಅಪವಾದ ತಪ್ಪದೂ ನರವೇಷಧಾರೀ ಹರಿಕೃಷ್ಣನಾ ಹಿಡಿದು ಹುಳುವಂಥ ನರರಿಗೂ ಇದು ಬೆನ್ನ ಬಿಡದೂ” ಅಂತ ಶುರುವಾಗುವ ಈ ಹಾಡು ಚೌತಿಯ ಚಂದ್ರನ ನೋಡಿಬಿಟ್ಟ ಕೃಷ್ಣ ಹೇಗೆಲ್ಲ ಲೋಕಾಪವಾದಕ್ಕೆ ಸಿಕ್ಕಿದ, ಭಾದ್ರಪದ ಶುಕ್ಲಚೌತಿಯ ಚಂದ್ರನನ್ನು ನೋಡಿದವರಿಗೆ ಅಪವಾದ ಯಾಕೆ ಬರುವುದು ಅಂತೆಲ್ಲ ಹೇಳುತ್ತಾ ಹೋಗುತ್ತದೆ. ನಮ್ಮೂರಲ್ಲಿ ಗಣೇಶ ಚತುರ್ಥಿ ಹತ್ತಿರಾಗುತ್ತಿದ್ದಂತೆ ಅಲ್ಲಲ್ಲಿ ಗಣೇಶನ ಚಪ್ಪರಕ್ಕಾಗಿ ಕಂಬಗಳನ್ನ ನೆಲಕ್ಕೂರುತ್ತಲೇ ಒಂದು ಕಂಬಕ್ಕೆ ಧ್ವನಿವರ್ಧಕ ಸಿಕ್ಕಿಸಿಬಿಡುತ್ತಿದ್ದರು. ಗಜಮುಖನೇ ಗಣಪತಿಯೇ ಎಂದು ಶುರುವಾಗುವ ಹಾಡಿನ ಸರಣಿಯಲ್ಲಿ ಬರುವ ಈ ಕಾವ್ಯಕಥನ ಹಬ್ಬದ ನಂತರವೂ ಕಿವಿಯಲ್ಲಿ ಗುಯ್ಗುಡುತ್ತಾ ಇರುತ್ತಿತ್ತು.

ನಾವು ಉಡುಪಿಯ ಜನ ಕಾಲದೇಶ, ಜಾತಿಧರ್ಮಗಳಾಚೆ ಲೋಕಕ್ಕೇ ಸ್ವಂತನೆನಿಸುವ ಕೃಷ್ಣನನ್ನು ಎಲ್ಲಕ್ಕಿಂತ ಹೆಚ್ಚು ನಮಗೆ ಸೇರಿದವನು ಅಂತ ಅಘೋಷಿತವಾಗಿ ಮಾಡಿಕೊಂಡವರು. ನೋವು-ಅವಮಾನಗಳು ಕಾಡುವಾಗಲೂ ಕೃಷ್ಣಾರ್ಪಣ ಅಂದುಬಿಟ್ಟು, ಆ ಕ್ಷಣವೇ ಅವುಗಳಿಂದ ಬಿಡುಗಡೆ ಪಡೆದೆವೇನೋ ಎಂಬಂತೆ ಹುಚ್ಚು ಕೃಷ್ಣಸಂವೇದನೆಯಲ್ಲಿ ಬದುಕುತ್ತಿದ್ದವರ ನಡುವೆ ನಾನೂ ಅವನನ್ನು ಬಹಳ ಹಚ್ಚಿಕೊಂಡುಬಿಟ್ಟಿದ್ದೆ. ಅಂಥದ್ದರಲ್ಲಿ ಈ ಗಣೇಶನ ಡುಮ್ಮೊಟ್ಟೆಯನ್ನ ನೋಡಿ ಆ ಚಂದ್ರ ನಕ್ಕದ್ದಕ್ಕೆ ಸಿಟ್ಟು ಬಂದು ಇವ ಅವನಿಗಿತ್ತ ಶಾಪಕ್ಕೆ ನಮ್ಮ ಕೃಷ್ಣ ತುತ್ತಾಗಿ ಈ ಪರಿಯೆಲ್ಲ ಒದ್ದಾಡಬೇಕಾಯಿತಲ್ಲಾ ಅಂತ ಈ ಹಾಡನ್ನ ಕೇಳಿದಾಗೆಲ್ಲ ಗಣಪತಿಯ ಮೇಲೆ ಒಳಗೊಳಗೇ ಮುನಿಸಿಕೊಳ್ಳುತ್ತಿದ್ದೆ. “ಹೌದು, ಹೊಟ್ಟೆ ಹೊರಲಾರದಷ್ಟು ತಿಂದು, ಬಿದ್ದು ಅವನ ಹೊಟ್ಟೆ ಒಡೆದದ್ದಾದರೆ ಚಂದ್ರನಿಗೆ ನಗು ಬಂದದ್ದರಲ್ಲಿ ತಪ್ಪೇನಿತ್ತು? ಇವನಿಗೆ ಯಾಕಷ್ಟು ಸಿಟ್ಟು ಬರಬೇಕಿತ್ತು, ಇಡೀ ವಿಶ್ವಕ್ಕೇ ಆಗುವಂಥದ್ದೊಂದು ಶಾಪ ಯಾಕಪ್ಪಾ ಕೊಡಬೇಕಿತ್ತು” ಅಂತೆಲ್ಲಾ ಯೋಚನೆ ಬರುತ್ತಿತ್ತು. ಒದ್ದೆಬಟ್ಟೆಯಲ್ಲಿ ಪಂಚಕಜ್ಜಾಯಕ್ಕೆ ಅಂತ ದೊಡ್ಡ ಬಾಣಲೆ ತುಂಬಾ ತೆಂಗಿನಕಾಯಿ ಹೆರೆಯುತ್ತಿದ್ದ ಅಪ್ಪ, “ಮುಟ್ಟಬೇಡ.. ಮುಟ್ಟಬೇಡ” ಅನ್ನುತ್ತಲೇ ಪಟ್ಟೆಮಡಿಯಲ್ಲಿ ಚೌತಿಯ ದಿನವಿಡೀ ಕಡುಬು, ಉಂಡ್ಲುಕ, ಉಂಡೆ-ಚಕ್ಕುಲಿ ಅಂತ ಕಳೆದುಬಿಡುತ್ತಿದ್ದ ಅಮ್ಮ, ಗಣಪತಿಯ ಗುಡಿಯೆದುರು ಬಸ್ಕಿ ತೆಗೆದು, ಕೆನ್ನೆ ಬಡಿದುಕೊಂಡು ನಮಸ್ಕರಿಸುತ್ತಿದ್ದ ಬಂಧುಗಳು- ಇವರೆಲ್ಲರ ನಡೆನುಡಿಯಲ್ಲಿ ಕ್ಷಿಪ್ರಪ್ರಸಾದಿ ಗಣಪತಿಯ ಶೀಘ್ರ ಕೋಪದೆಡೆಗಿನ ಭಯಭಕ್ತಿ ನೋಡನೋಡುತ್ತಾ ಆ ಯೋಚನೆ ಅಲ್ಲೇ ತಲೆಮರೆಸಿಕೊಂಡುಬಿಡುತ್ತಿದ್ದವು. ವಿದ್ಯೆಗೆ ಅಧಿಪತಿಯಂತೆ ಬೇರೆ, ಅವನನ್ನು ಆಡಿಕೊಳ್ಳುವ ಉಸಾಬರಿ ಯಾಕೆ ಸುಮ್ಮನೆ? ಒಬ್ಬರೊಳಗೆ ಕೆಲವನ್ನು ಮೆಚ್ಚಿಕೊಳ್ಳುವಷ್ಟೇ ಕೆಲವನ್ನು ಮೆಚ್ಚದೇ ಇರುವ ಸ್ವಾತಂತ್ರ್ಯವಿಲ್ಲದಲ್ಲಿ ಆ ವ್ಯಕ್ತಿತ್ವದೊಡನೆ ಆಪ್ತತೆ ಬೆಳೆಯದು. ಹೀಗೆ ಚಿಕ್ಕಂದಿನಲ್ಲಿ ಗಣೇಶನೆಡೆಗೆ ಒಂದು ಅಂತರ ಹುಟ್ಟಿ ಉಳಿದುಬಿಟ್ಟಿತ್ತು.

ನನ್ನ ಮಗಳು ಮೂರನೆಯ ತರಗತಿಯಲ್ಲಿದ್ದ ದಿನಗಳವು. ಅವಳನ್ನು ಶಾಲೆಗೆ ಬಿಟ್ಟು ಬರುವಾಗ ಅವಳದೇ ಕ್ಲಾಸಿನ ಗುಂಡಣ್ಣನೊಬ್ಬ ಎದುರಾಗುತ್ತಿದ್ದ. ಆ ಮಗುವಿನ ಮುಖದಲ್ಲಿ ಭಯಂಕರವಾದೊದು ಅಸಹನೆ ಮನೆಮಾಡಿರುತ್ತಿತ್ತು. ಟ್ರೋಲಿಯಂತಿದ್ದ ಪುಸ್ತಕದ ಚೀಲವನ್ನು ದರದರನೆ ನೆಲದಲ್ಲಿ ಎಳೆಯುತ್ತಾ ತನ್ನ ಹೊಟ್ಟೆಯ ಭಾರವನ್ನೂ ಆ ಚೀಲದ ಭಾರವನ್ನೂ ಇನ್ನು ಸಹಿಸಲಾರೆ ಎಂಬಂತೆ ನಡೆದು ಬರುವಾಗ ಆಲಸ್ಯವೇ ಮೈವೆತ್ತ ಭರ್ಜರಿ ಆಕೃತಿಯೆನಿಸುತ್ತಿದ್ದ. ಚಿಗರೆಗಳ ಹಾಗೆ ಕುಣಿಯುವ ಮಕ್ಕಳ ನಡುವೆ ಆ ಮುಖದಲ್ಲಿನ ಜಾಡ್ಯ, ಅಸಮಾಧಾನ ನನ್ನನ್ನು ಕಾಡುತ್ತಲೇ ಇರುತ್ತಿದ್ದವು. ಮಕ್ಕಳು ಅವವನ್ನು ಗೇಲಿ ಮಾಡುತ್ತಿದ್ದುದು, ಪ್ರತಿಯಾಗಿ ಅವರಿಗೆ, ಟೀಚರ್ಸ್‌ಗೆ ಅವ ಕೊಡುತ್ತಿದ್ದ ಉಪದ್ರವಗಳು, ಅವನಿಗೆ ಸಿಗುತ್ತಿದ್ದ ಶಿಕ್ಷೆ ಇದೆಲ್ಲವನ್ನೂ ಮಗಳು ಬಂದು ಹೇಳಿಕೊಳ್ಳುತ್ತಿದ್ದಳು. ಮುಂದೊಮ್ಮೆ ಅವನಮ್ಮ ನನ್ನ ಮಗಳ ನೋಟ್ಸ್ ಕೇಳುವ ಸಲುವಾಗಿ ಶಾಲೆಯ ಹತ್ತಿರವೇ ಇದ್ದ ನಮ್ಮ ಮನೆಗೆ ಬಂದರು. ಅವನ ತಂಟೆಕೋರತನ, ಮೊಂಡುತನಗಳ ಬಗ್ಗೆ ಬಹಳಷ್ಟು ಹೇಳುತ್ತಾ ಬೇಸರಪಟ್ಟುಕೊಂಡರು. “ಮನೆತುಂಬಾ ಜನರಿದ್ದರೂ ಅವನನ್ನು ನಿಭಾಯಿಸಲಾಗದೇ ಎರಡನೇ ವರ್ಷಕ್ಕೇ ಅವನನ್ನ ಶಾಲೆಗೆ ಹಾಕಿಬಿಟ್ಟೆವು” ಅಂದರು. ಮಗುವಿದ್ದಾಗದಿಂದಲೂ ವಯಸ್ಸಿಗೆ ಮೀರಿದ ದೇಹ ಬೆಳವಣಿಗೆಯಿದ್ದುದರಿಂದ ಮತ್ತು ಅವನಿಗಿಂತ ಒಂದೇ ವರ್ಷ ಚಿಕ್ಕವನಾದ ತಮ್ಮನೊಬ್ಬ ಬೆನ್ನಿಗಿದ್ದುದರಿಂದ ಅವನನ್ನು ಮಗುವೆಂದು ಪರಿಗಣಿಸಬೇಕಾದ ಹೊತ್ತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆಯನ್ನ ಅವನಿಂದ ನಿರೀಕ್ಷಿಸಿದ್ದರು ಅವರು. ಅವನ ತಿಂಡಿಬಾಕತನವನ್ನು, ದೇಹದ ಗಾತ್ರವನ್ನು ಕೌಟುಂಬಿಕ ಹಾಸ್ಯದ ವಿಷಯವನ್ನಾಗಿಸಿದ್ದರು ಕೂಡಾ.

ಅವನ ಬಗ್ಗೆ ಆಕೆ ಹೀಗೆಲ್ಲ ದೂರುತ್ತಿದ್ದರೆ ಒಂದು ಗುಂಡುಕಲ್ಲಿನಂತೆ ಕೂತು ನನ್ನನ್ನೊಮ್ಮೆ ಆಕೆಯನ್ನೊಮ್ಮೆ ನೋಡುತ್ತಿದ್ದ ಆ ಮಗುವಿನ ನಿರ್ವಿಕಾರ ಭಂಗಿಗೆ ಒಂದು ಕ್ಷಣ ವಾತ್ಸಲ್ಯವುಕ್ಕಿಬಿಟ್ಟಿತ್ತು. ಒಂದಷ್ಟು ಕುರುಕುರು ತಂದು ಅವನೆದುರಿಟ್ಟರೆ ಶಾಲೆ ಮುಗಿಸಿ ಬಂದಿದ್ದವ ಗಬಗಬನೆ ತಿನ್ನಲಾರಂಭಿಸಿದ್ದ. ಅವನಮ್ಮನೂ, ತಮ್ಮನೂ ಬಹಳ ಸಂಭಾವಿತರಂತೆ ಒಂದು ಬೆರಳನ್ನೂ ಪ್ಲೇಟಿಗೆ ತಾಕಿಸದೆ, ಅವನ ಈ ಪರಿಗೆ ಸಂಕೋಚ ಪಟ್ಟವರಂತೆ ಕೂತಿದ್ದರು. “ಏ ವಿಜೇತ್ ಸಾಕುಬಿಡು” ಅಂತ ತಮ್ಮ ಕೈಯ್ಯೆಳೆಯುತ್ತಿದ್ದರೆ, ಇವ ಕೋಪದಿಂದ ತಮ್ಮನನ್ನು ದೂಡಿಬಿಟ್ಟಿದ್ದ. ಸಣ್ಣಕ್ಕಿದ್ದ ಆ ತಮ್ಮ ಅಷ್ಟು ದೂರ ಹೋಗಿ ಬಿದ್ದು ಹಣೆಯಲ್ಲಿ ರಕ್ತ ಬಂತು. ಬಯ್ಯುತ್ತಲೇ ದರದರ ಇವನನ್ನು ಎಳೆದುಕೊಂಡು ಹೊರಟ ತಾಯಿಯ ಮುಖದಲ್ಲಿದ್ದ ಅಸಹಾಯ ನೋವು, ಮಗುವಿನ ಮುಖದಲ್ಲಿದ್ದ ದಿವ್ಯನಿರ್ಲಕ್ಷ್ಯ ಬಹಳ ಹೊತ್ತು ಕಾಡಿದ್ದವು.

ವಿಜೇತನೇ ಸಹಜವಾಗಿದ್ದನಲ್ಲವೇ, ಅವರಮ್ಮ, ತಮ್ಮನೇ ಸ್ವಲ್ಪ ಅಸಹಜವಾಗಿದ್ದರಲ್ಲವೇ?
ಅವನ ಯೋಚನೆಗಳೊಡನೆ ಗಣಪತಿಯ ಯೋಚನೆ ಥಳುಕು ಹಾಕಿಕೊಂಡವು. ಗೌರಿಯ ಮೈಮಣ್ಣಿನಿಂದಾದ ಗಣೇಶನ ಹುಟ್ಟಿಂದ ಹಿಡಿದು, ಆನೆಯ ಮುಖ, ಅಗಲ ಕಿವಿ, ದೊಡ್ಡ ಜೀವ, ಡುಮ್ಮೊಟ್ಟೆ ಅವನ ಪಾಲಿಗೆ ಬಂದವೆಲ್ಲವೂ ಅಸಹಜವಾದವುಗಳೇ. ಮಗನೆಂದರಿಯದೇ ಕೋಪದ ಕೈಲಿ ಬುದ್ಧಿ ಕೊಟ್ಟ ತನ್ನ ಅಚಾತುರ್ಯಕ್ಕೆ ಪ್ರತಿಯಾಗಿ ಆ ಪುಟ್ಟ ಜೀವಕ್ಕೆ ಗಣಾಧಿಪತಿ, ವಿದ್ಯಾಧಿಪತಿ, ವಿಘ್ನ ನಿವಾರಕ, ಅಗ್ರಪೂಜೆಯೇ ಮುಂತಾದ ವಿಶೇಷ ವರಗಳನ್ನಿತ್ತು, ಅವನ ಬಾಲ್ಯದೊಳಗಿಗೆ ಒಂದು ಬೃಹತ್ತತೆಯನ್ನು ತುಂಬಿಬಿಟ್ಟಿದ್ದ ಶಿವ. ಮೂರ್ಲೋಕವನ್ನು ಸುತ್ತಿ ಬರುವ ಪಂದ್ಯದೊಳಗೂ ಬಾಲ್ಯಸಹಜ ಚಿಂತನೆಯಿಂದಾಚೆಗೆ ಶಿವಪಾರ್ವತಿಯರನ್ನೇ ಸುತ್ತು ಬಂದುಬಿಡುವ ಅಕಾಲ ಪ್ರೌಢತೆಯನ್ನು ಆವಾಹಿಸಿಕೊಂಡಿದ್ದವನೊಳಗೆ ವಿಜೇತನಂಥದೇ ಅಸಹನೆಯೊಂದು ಮನೆಮಾಡಿದ್ದೂ ಸಹಜವೇ ತಾನೇ? ಹೊಸತೊಂದು ಲಹರಿಯೊಳಗೆ ಗಣಪತಿ ವಿಜೇತನೊಳಗೆ, ವಿಜೇತ ಗಣಪತಿಯೊಳಗೆ ಕಾಣಿಸತೊಡಗಿದ್ದರು. ಅಂದಿನಿಂದೀಚೆಗೆ ಗುಂಡುಗುಂಡಾಗಿರುವ ಮಕ್ಕಳೊಳಗೆ ಒಬ್ಬ ಗಣಪ ಕಾಣಿಸುತ್ತಾನೆ, ನಮ್ಮಿಬ್ಬರ ನಡುವಿನಲ್ಲಿದ್ದ ಅಂತರದಲ್ಲಿ ಆಗೊಂದು ಮುದ್ದು ಉಕ್ಕಲಾರಂಭಿಸುತ್ತದೆ.