ಗುರುಪ್ರೀತ್ ಕೌರ್ ಹುಡುಕುತ್ತಿದ್ದುದು ಒಂದು ಗುಟುಕು ನೀರಿಗೆ ಮಾತ್ರ.

0
35

ಶತಮಾನಗಳಿಂದ “ಅಮೆರಿಕನ್ ಡ್ರೀಮ್” ಎಂಬ ಹೊಂಗನಸನ್ನು ಹುಡುಕುತ್ತಾ, ಕೋಟ್ಯಾಂತರ ಮಂದಿ ಈ “ಬೆಟ್ಟದ ಮೇಲಿನ ಹೊಳೆಯುವ ನಗರ”ವನ್ನು ತಲುಪಿದ್ದಾರೆ. ಅರಿಜ಼ೋನದ ಬಿಸಿಲಿನ ತಾಪಕ್ಕೆ ಶವವಾದಾಗ ಏಳು ವರ್ಷವೂ ತುಂಬಿರದ ಗುರುಪ್ರೀತ್ ಕೌರ್ ಹುಡುಕುತ್ತಿದ್ದುದು ಕೇವಲ ಒಂದು ಗುಟುಕು ನೀರಿಗೆ ಮಾತ್ರ.

ಶೇಷಾದ್ರಿ ಗಂಜೂರು
seshadri.ganjur@gmail.com

ಗುರುಪ್ರೀತ್ ಕೌರ್ ಆರು ವರ್ಷದ ಪುಟ್ಟ ಹುಡುಗಿ. ಇನ್ನೊಂದು ತಿಂಗಳಿಗೆ ಏಳನೆಯ ಹುಟ್ಟುಹಬ್ಬವನ್ನು ಆಚರಿಸಬೇಕಿದ್ದವಳು. ತನ್ನ ತಾಯಿಯ ಜೊತೆಗೆ ಭಾರತವನ್ನು ಬಿಟ್ಟು ದೂರದ ಝಗಮಗಿಸುವ ಅಮೆರಿಕದ ಕಡೆಗೆ ಹೊರಟಾಗ, ತನ್ನ ಹುಟ್ಟುಹಬ್ಬದ ಸಂಭ್ರಮದ ಬಗೆಗೆ ಕನಸು ಕಂಡಿದ್ದಿರಲೂ ಬಹುದು.

ಅಮೆರಿಕದ ಅಧ್ಯಕ್ಷನಾಗಿದ್ದ ರೋನಲ್ಡ್ ರೀಗನ್ ತನ್ನ ಒಂದು ಭಾಷಣದಲ್ಲಿ, ಅಮೆರಿಕವನ್ನು “ಬೆಟ್ಟದ ಮೇಲಿನ ಥಳಥಳಿಸುವ ನಗರ” (“ಶೈನಿಂಗ್ ಸಿಟಿ ಅಪಾನ್ ಎ ಹಿಲ್”) ಎಂದು ಬಣ್ಣಿಸುತ್ತಾನೆ. ಅಮೆರಿಕದ ಈ ಹೊಳಪು ತಲೆತಲಾಂತರದಿಂದ ಇಡೀ ವಿಶ್ವದ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವುದು ಸುಳ್ಳಲ್ಲ. ೨೦೧೭ರಲ್ಲಿ ವಿಶ್ವಸಂಸ್ಠೆ ಪ್ರಕಟಿಸಿದ ವರದಿಯೊಂದರ ಪ್ರಕಾರ, ಅಮೆರಿಕದ ಜನಸಂಖ್ಯೆಯಲ್ಲಿ ಸುಮಾರು ಐದು ಕೋಟಿ ಜನ ಪರದೇಶಗಳಿಂದ ಬಂದ ವಲಸಿಗರು; ಎಂದರೆ ಆಂಧ್ರ ಪ್ರದೇಶದಂತಹ ಒಂದು ದೊಡ್ಡ ರಾಜ್ಯದ ಜನಸಂಖ್ಯೆಯಷ್ಟು ವಿದೇಶಿಯರು ಅಲ್ಲಿದ್ದಾರೆ. (ಅದೇ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಐವತ್ತು ಲಕ್ಷ ವಲಸಿಗರಿದ್ದಾರೆ. ಆದರೆ, ಭಾರತ ಸರ್ಕಾರದ ಪ್ರಕಾರ ಈ ಸಂಖ್ಯೆ ಎರಡು ಕೋಟಿಗೂ ಮೇಲ್ಪಟ್ಟಿದೆ. ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದಿಂದ ಬಂದವರು.)

ವಲಸೆ ಹೊಸದೇನಲ್ಲ. ಉತ್ತಮ ಜೀವನಕ್ಕಾಗಿ ಮಾನವರು ಸುಮಾರು ಎಪ್ಪತ್ತು ಸಾವಿರ ವರ್ಷಗಳಿಂದ ವಲಸೆ ಹೋಗುತ್ತಲೇ ಇದ್ದಾರೆ. ಮೊದಲು ಆಫ್ರಿಕಾ ಖಂಡದಿಂದ ಏಷ್ಯಾ, ಆಸ್ಟ್ರೇಲಿಯಾ ಮತ್ತು ಯೂರೋಪ್ ಖಂಡಗಳಿಗೆ. ನಂತರ (ಸುಮಾರು ೧೫ – ೨೦ ಸಾವಿರ ವರ್ಷಗಳ ಹಿಂದೆ) ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಕಡೆಗೆ. ಹೊಸದೊಂದು ಜಾಗದಲ್ಲಿ ನವ ಜೀವನವನ್ನು ಕಟ್ಟಿಕೊಳ್ಳುವ ಪ್ರಯತ್ನ ನಿಸರ್ಗದತ್ತವಾದುದು. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ಸಸ್ಯಗಳೂ ಸಹ ದೇಶಾಂತರ-ಖಂಡಾಂತರ ಮಾಡುತ್ತಲೇ ಇವೆ. ಇಂದು ನಮ್ಮ ಮನೆಯ ಹಿತ್ತಿಲಲ್ಲೋ, ಮುಂದಿನ ತೋಟದಲ್ಲೋ ಬೆಳೆಯುವ ಟೊಮೇಟೋ, ಸಪೋಟಗಳು ಮೂಲತಃ ದಕ್ಷಿಣ ಅಮೆರಿಕಾದಿಂದ ಬಂದಂತಹ ಸಸ್ಯಗಳು. (ಇದು ಟೊಮೇಟೋ, ಸಪೋಟಾಗಳಿಗಷ್ಟೇ ಸೀಮಿತವಾದುದಲ್ಲ; ಡಾ.ಬಿ.ಜಿ.ಎಲ್.ಸ್ವಾಮಿಯವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ” ಓದಿದರೆ, ಇದರ ವಿಸ್ತಾರದ ಅರಿವಾಗುತ್ತದೆ)

ಈ ವಲಸೆ, ದೇಶದಿಂದ ದೇಶಕ್ಕೋ ಅಥವಾ ಖಂಡದಿಂದ ಖಂಡಕ್ಕೋ ಮಾತ್ರ ಆಗ ಬೇಕೆಂದೇನೂ ಇಲ್ಲ. ಒಂದು ದೇಶದ ಒಳಗೂ ಈ ವಲಸೆ ನಡೆಯುತ್ತಲೇ ಇದೆ. ೨೦೧೧ರ ಸೆನ್ಸಸ್ ಪ್ರಕಾರ, ಭಾರತದಲ್ಲಿ ಸುಮಾರು ೪೫ ಕೋಟಿ ಜನ ತಾವು ಹುಟ್ಟಿರುವ ಸ್ಥಳದಿಂದ ವಲಸೆ ಹೋಗಿದ್ದಾರೆ. ಇದರಲ್ಲಿ ಬಹಳಷ್ಟು ಜನ ತಮ್ಮ ರಾಜ್ಯದ ಗಡಿದಾಟಿಲ್ಲವಾದರೂ, ತಮ್ಮ ಊರೋ, ಜಿಲ್ಲೆಯಿಂದಲೋ ಹೊರ ಹೋಗಿದ್ದಾರೆ. ಅಂತರ ರಾಜ್ಯ ವಲಸೆ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಗುಜರಾತ್ ಮುಂತಾದ ರಾಜ್ಯಗಳು ಬಿಹಾರ, ಉತ್ತರ ಪ್ರದೇಶ, ಒರಿಸ್ಸಾದಂತಹ ರಾಜ್ಯಗಳಿಂದ ಜನರನ್ನು ಆಕರ್ಷಿಸುತ್ತಲೇ ಇವೆ. ಕೆಲವು ಮೂಲಗಳ ಪ್ರಕಾರ, ಈ ಅಂತರ ರಾಜ್ಯ ವಲಸೆ, ಹಿಂದಿನ ದಶಕಕ್ಕೆ ಹೋಲಿಸಿದರೆ ಶೇ.೨೦೦ರಷ್ಟು ಹೆಚ್ಚಾಗಿದೆ! ವಲಸೆ ಹೊಸದಲ್ಲವಾದರೇ, ವಲಸಿಗರ ಕುರಿತು ವಿರೋಧವೂ ಹೊಸದಲ್ಲ. ವಲಸೆ ಹೆಚ್ಚಾದಂತೆ, ಸ್ಥಳೀಯರ ಮತ್ತು ವಲಸಿಗರ ನಡುವಿನ ತಿಕ್ಕಾಟವೂ ಹೆಚ್ಚುತ್ತಲೇ ಇದೆ. ಇಂತಹ ತಿಕ್ಕಾಟಗಳಿಗೆ ಇದೇ ಕಾರಣ ಎಂದೇನೂ ಇಲ್ಲ. ದೇಶ, ಭಾಷೆ, ಸಂಸ್ಕೃತಿ, ಧಾರ್ಮಿಕ ಅಸ್ಮಿತೆಯ ರಕ್ಷಣೆ, ಸ್ಥಳೀಯರ ನಿರುದ್ಯೋಗ ಕೊನೆಗೆ, ಟೆರರಿಸಂ ವಿರೋಧ, ಇತ್ಯಾದಿಗಳೂ ಸಹ ಕಾರಣಗಳೋ, ನೆಪಗಳೋ ಆಗಿವೆ.

ಪ್ರಜಾತಂತ್ರ ರಾಷ್ಟ್ರಗಳಲ್ಲಿ, ಸ್ಥಳೀಯರ-ವಲಸಿಗರ ನಡುವಿನ ಈ ತಿಕ್ಕಾಟ, ಮತದಾರರ ಧೃವೀಕರಣಕ್ಕೆ ಸುಲಭದ ಸಲಕರಣೆಯಾಗಿ ರಾಜಕೀಯ ನಾಯಕರಿಗೆ ಒದಗಿದೆ. ಬಾಳಾ ಥಾಕ್ರೆ ಮತ್ತು ಅವರ ಶಿವಸೇನೆ ಮುಂದೆ ಬಂದಿದ್ದು ‘ಮರಾಠಿ ಮನೂಸ್’ ರಕ್ಷಣೆಯ ಹೆಸರಿನಲ್ಲಿಯೇ ಎಂಬುದು ಎಲ್ಲರಿಗೂ ತಿಳಿದೇ ಇರುವ ಹಳೆಯ ಸಂಗತಿ. ಕಳೆದ ಡಿಸೆಂಬರ್ ೧೮ರಂದು ಕಾಂಗ್ರೆಸ್ ಪಕ್ಷದ ಕಮಲನಾಥ್ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲೇ ಹೇಳಿದ ಮಾತಿದು: “ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಂದ ಬರುತ್ತಿರುವ ವಲಸಿಗರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಕಡಿಮೆಯಾಗುತ್ತಿದೆ” . ಅದು ನಿಜವೇ ಇರಬಹುದು. ಆದರೆ, ಮಧ್ಯಪ್ರದೇಶದಿಂದ ವಲಸಿಗರು ಪಕ್ಕದ ಮಹಾರಾಷ್ಟ್ರ, ಗುಜರಾತ್ ಮತ್ತು ಕೊಂಚ ದೂರದ ಕರ್ನಾಟಕ, ದೆಹಲಿಗಳಿಗೆ ಹೋಗುತ್ತಿರುವುದೂ ಸಹ ಅಷ್ಟೇ ನಿಜ.

ಬಾಂಗ್ಲಾದೇಶಿ ವಲಸಿಗರ ವಿಚಾರವಂತೂ ಲೋಕಸಭಾ ಚುನಾವಣೆಯಲ್ಲಿ ಬಹು ಚರ್ಚಿತ ವಿಷಯ. ಬಿ.ಜೆ.ಪಿ.ಯ ರಾಷ್ಟ್ರಾಧ್ಯಕ್ಷ (ಮತ್ತು ಇಂದಿನ ಕೇಂದ್ರ ಗೃಹ ಸಚಿವ) ಅಮಿತ್ ಶಾ, ತಮ್ಮ ಭಾಷಣದಲ್ಲಿ ಈ “ಅಕ್ರಮ” ವಲಸಿಗರನ್ನು “ಗೆದ್ದಲು ಹುಳುಗಳು” ಎಂದರು. ಅಷ್ಟೇ ಅಲ್ಲ, ಬಿ.ಜೆ.ಪಿ ಸರ್ಕಾರ ಈ ವಲಸಿಗರನ್ನು “ಒಬ್ಬೊಬ್ಬರನ್ನಾಗಿ ಹಿಡಿದು ಬಂಗಾಳ ಕೊಲ್ಲಿಗೆ ಎಸೆಯುವ” ಮಾತನ್ನೂ ಆಡಿದರು. ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳುವ ಒಂದೇ ಉದ್ದೇಶದಿಂದ ಬರುವ ವಲಸಿಗರನ್ನು, “ಹುಳ”ಗಳಿಗೆ ಹೋಲಿಸುವುದು ಮಾನವೀಯತೆಯೇ ಎಂಬ ಪ್ರಶ್ನೆ ಹಾಗಿರಲಿ, ಗೆದ್ದಲು ಹುಳುಗಳನ್ನು ಹಿಡಿದು ನೀರಿಗೆಸೆಯುವುದು ಹೊಸ ವಿಚಾರವೇ ಎನ್ನಬಹುದು!

***

ಹೊಸದೊಂದು ಬದುಕಿನ ಆಸೆ ಕಟ್ಟಿಕೊಂಡು ಅಮೆರಿಕದ ಕಡೆಗೆ ಹೊರಟ ಗುರುಪ್ರೀತ್ ಕೌರ್‌ಳ ಬಗೆಗೆ ಸಾಕಷ್ಟು ವಿವರ ನಮಗೆ ಇನ್ನೂ ದೊರಕಿಲ್ಲ. ನಮಗೆ ಗೊತ್ತಿರುವ ಸಂಗತಿ ಇಷ್ಟೇ: ಅವಳು ಭಾರತದವಳು. ಮೆಕ್ಸಿಕೊದಿಂದ ಅಮೆರಿಕದ ಗಡಿಯನ್ನು ಅವಳು ದಾಟಿದಾಗ ಅವಳ ಜೊತೆಗಿದ್ದವಳು ಅವಳ ಅಮ್ಮ ಮತ್ತು ಇನ್ನೂ ಮೂರು ಜನ ಭಾರತೀಯರು.

ಕೆಲವರಿಗೆ, ಇದು ಆಶ್ಚರ್ಯವೆನ್ನಿಸಬಹುದು. ಭಾರತೀಯರು ವಲಸೆ ಹೋಗುವುದರಲ್ಲಿ ನಂಬರ್ ೧!. ವಿಶ್ವಸಂಸ್ಥೆಯ ೨೦೧೫ರ ವರದಿಯ ಪ್ರಕಾರ, ವಿಶ್ವದಲ್ಲಿ ಸುಮಾರು ೨೪ ಕೋಟಿ ಅಂತರರಾಷ್ಟ್ರೀಯ ವಲಸಿಗರಿದ್ದಾರೆ. ಅದರಲ್ಲಿ, ಭಾರತದವರು ಸುಮಾರು ೧.೬ ಕೋಟಿ. ಎರಡನೆಯ ಸ್ಥಾನ ಮೆಕ್ಸಿಕೋ ದೇಶಕ್ಕೆ – ಸುಮಾರು ೧.೨ ಕೋಟಿ. ಈ ವಲಸಿಗರಿಂದ ಸ್ವದೇಶಕ್ಕೆ ಬರುವ ಹಣದಲ್ಲೂ ಭಾರತವೇ ನಂಬರ್ ಒನ್. ಭಾರತದಿಂದ ಹೊರ ಹೋದ ವಲಸಿಗರು ಪ್ರತಿ ವರ್ಷ ಸುಮಾರು ೫೦,೦೦೦ ಕೋಟಿ ರೂಪಾಯಿಗಳನ್ನು ಸ್ವದೇಶಕ್ಕೆ ಕಳುಹಿಸುತ್ತಾರೆ. ಇದರಲ್ಲಿ ಅಮೆರಿಕದಿಂದ ಬರುವ ಹಣ ಸುಮಾರು ೧೦,೦೦೦ ಕೋಟಿ ರೂಪಾಯಿಗಳು.

ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಉದ್ಯೋಗಗಳಿಗೆ ಅಂತಹ ಬರವೇನೂ ಇಲ್ಲ. ರಾಷ್ಟ್ರೀಯ ನಿರುದ್ಯೋಗ ದರ ಶೇ.೩.೬ ಇದ್ದರೆ, ಹಲವು ರಾಜ್ಯಗಳಲ್ಲಿ ಅದು ಶೇ. ೨.೫ರ ಆಸುಪಾಸಿನಲ್ಲಿದೆ. ಹಲವು ದಶಕಗಳಿಂದ ಕೆಲವೊಂದು ಉದ್ಯೋಗಗಳಿಗೆ, ಅಮೆರಿಕ, ಹೊರ ದೇಶಗಳಿಂದ ಬರುವ ವಲಸಿಗರನ್ನೇ ನಂಬಿದೆ. ಆ ಉದ್ಯೋಗಗಳು, ಎಚ್-೧ ವೀಸಾ ದಿಂದ (ಬಹು ಮಟ್ಟಿಗೆ ಭಾರತೀಯರೇ) ತುಂಬುವ ಟೆಕ್ನಾಲಜಿ ಉದ್ಯೋಗಗಳೇ ಇರಬಹುದು, ಅಥವಾ ಬಡ ಮೆಕ್ಸಿಕನ್ನರು ನಿರ್ವಹಿಸುವ ಫಾರ್ಮಿಂಗ್ ಮತ್ತು ಕೃಷಿ ಕಾಯಕಗಳೇ ಇರಬಹುದು. ಅಮೆರಿಕದ ನ್ಯಾಷನಲ್ ಅಕಾಡೆಮಿಸ್ ಆಫ್ ಸೈನ್ಸ್, ಎಂಜಿನಿಯರಿಂಗ್ ಅಂಡ್ ಮೆಡಿಸಿನ್ ತನ್ನ ೨೦೧೭ರ ವರದಿಯಲ್ಲಿ ಹೇಳುವಂತೆ, “ವಲಸಿಗರಿಂದ ಅಮೆರಿಕದ ಆರ್ಥಿಕ ಬೆಳವಣಿಗೆಗೆ ಧನಾತ್ಮಕ ಪರಿಣಾಮವೇ ಆಗಿದೆ”. ಅಮೆರಿಕದ ಅಧ್ಯಕ್ಷ ರೀಗನ್ನನ ಆ “ಬೆಟ್ಟದ ಮೇಲಿನ ನಗರ”ದ ಹೊಳಪಿಗೆ ಮೆರಗು ನೀಡಲು ಕೋಟ್ಯಾಂತರ ಮಂದಿ ವಲಸಿಗರು ತಮ್ಮ ಕೈ ಸವೆಸಿದ್ದಾರೆ. ಜೊತೆಗೇ, ಹೊಸ ಬದುಕನ್ನೂ ಕಟ್ಟಿಕೊಂಡಿದ್ದಾರೆ. ಅವರಲ್ಲಿ ಎಷ್ಟೋ ಮಂದಿ, ಅಮೆರಿಕವನ್ನು “ಅಕ್ರಮ”ವಾಗಿ ತಲುಪಿದವರು ಅಥವಾ ಸರ್ಕಾರಿ ದಾಖಲೆ ಇಲ್ಲದೆ ಅಮೆರಿಕದಲ್ಲಿ ನೆಲೆಸಿದಂತಹ ವಲಸಿಗರು.

ಈ ಕೊಡು-ಕೊಳ್ಳುವಿಕೆಯಿಂದ, ಅಮೆರಿಕದಲ್ಲಿ ಎಷ್ಟೋ ಬದಲಾವಣೆಗಳಾಗಿವೆ. ಕ್ಯಾಲಿಫೋರ್ನಿಯಾ, ಟೆಕ್ಸಾಸ್ ನಂತಹ ದೊಡ್ಡ ರಾಜ್ಯಗಳನ್ನೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ, ಅಲ್ಲಿನ ಬಿಳಿಯರು ಅಲ್ಪಸಂಖ್ಯಾತರಾಗಿಬಿಟ್ಟಿದ್ದಾರೆ. ಇದು ಸಹಜವಾಗಿಯೇ ಹಲವರಲ್ಲಿ ಆತಂಕವನ್ನು ಮೂಡಿಸಿದೆ. ಈ ಆತಂಕ, ಬೂದಿಯ ಮರೆಯಲ್ಲಿದ್ದ ಜನಾಂಗವಾದ, ಉಗ್ರ ರಾಷ್ಟ್ರೀಯತೆಯ (ರೇಸಿಸಂ, ವೈಟ್ ನ್ಯಾಶನಲಿಸಂ) ಕೆಂಡವನ್ನು ಹೊರತಂದಿದೆ. ಇದನ್ನೇ ತನ್ನ ಚುನಾವಣಾ ಪ್ರಣಾಳಿಕೆಯ ಮುಖ್ಯ ಅಂಶವನ್ನಾಗಿ ಮಾಡಿಕೊಂಡ ಡೋನಲ್ಡ್ ಟ್ರಂಪ್, ಪ್ರತಿ ನಿತ್ಯ ವಲಸಿಗರ ವಿರುದ್ಧ ಕೆಂಡ ಕಾರುತ್ತಲೇ ಇದ್ದಾರೆ. ಅಮಿತ್ ಶಾ ಬಾಂಗ್ಲಾದೇಶಿ ವಲಸಿಗರನ್ನು “ಗೆದ್ದಲು ಹುಳು”ಗಳಿಗೆ ಹೋಲಿಸಿದರೆ, ಟ್ರಂಪ್ ಮೆಕ್ಸಿಕನ್ನರನ್ನು “ಮೃಗಗಳು” ಎನ್ನುತ್ತಾರೆ.

***

ಮೆಕ್ಸಿಕೊ ಮತ್ತು ಅಮೆರಿಕದ ಅರಿಜ಼ೋನ ರಾಜ್ಯದ ನಡುವಿನ ಗಡಿ ಪ್ರದೇಶ ಇರುವುದು ನಿರ್ಜನವಾದ ಮರುಭೂಮಿಯಲ್ಲಿ. ಬಿಸಿಲಿನ ಧಗೆಗೆ ಟೆಂಪರೇಚರ್ ೪೫-೫೦ ಡಿಗ್ರಿ ಸೆಲ್ಶಿಯಸ್ ಆಸುಪಾಸನ್ನು ಮುಟ್ಟುತ್ತದೆ. ಅಲ್ಲೊಂದು-ಇಲ್ಲೊಂದು ಇರುವ ಪಾಪಾಸು ಕಳ್ಳಿಗಳನ್ನು ಬಿಟ್ಟರೆ, ಬೇರೇನೂ ಕಾಣದು. ಮೈಲುಗಟ್ಟಲೆ ಅಲೆದಾಡಿದರೂ ಒಂದು ಹನಿ ನೀರೂ ದೊರಕದಂತಹ ಪ್ರದೇಶ ಅದು; ಮೆಕ್ಸಿಕೋದಿಂದ ವಲಸಿಗರನ್ನು ದಾಖಲೆ ರಹಿತರಾಗಿ ಅಮೆರಿಕದ ಗಡಿದಾಟಿಸಲು ಹೇಳಿ ಮಾಡಿಸಿದಂತಹ ಜಾಗ.

ಮೆಕ್ಸಿಕನ್ ಕಳ್ಳಸಾಗಣೆದಾರರು, ಕಳೆದ ವಾರ ಗುರುಪ್ರೀತ್ ಕೌರ್ ಮತ್ತು ಅವಳ ಅಮ್ಮನನ್ನು ಅಮೆರಿಕ ತಲುಪಿಸಿದ್ದು ಈ ಗಡಿಯ ಮೂಲಕವೇ. ಆಗ ಮಟ-ಮಟ ಮಧ್ಯಾಹ್ನದ ಬಿಸಿಲಿನ ಝಳ. ಉಷ್ಣಾಂಶ ೪೨ ಡಿಗ್ರಿ ದಾಟಿತ್ತು. ಗುರುಪ್ರೀತಳಿಗೆ ಬಾಯಾರಿಕೆ. ಅವಳ ಅಮ್ಮ ಮಗಳನ್ನು ಜೊತೆಗಾರರೊಂದಿಗೆ ಬಿಟ್ಟು ನೀರು ಹುಡುಕುತ್ತಾ ಹೊರಟಳು. ಮರುಭೂಮಿಯಲ್ಲಿ ಹಾದಿ ತಪ್ಪಿದ ಅವಳು ೨೨ ಗಂಟೆಗಳ ನಂತರ ಅಮೆರಿಕನ್ ಗಡಿ ರಕ್ಷಣಾ ಪಡೆಗೆ ಸಿಕ್ಕಿ ಬಿದ್ದಳು. ಅವಳ ಕತೆ ಕೇಳಿದ ಅಮೆರಿಕನ್ ಅಧಿಕಾರಿಗಳು, ಹೆಲಿಕಾಪ್ಟರಿನಲ್ಲಿ ಗುರುಪ್ರೀತಳಿಗಾಗಿ ಹುಡುಕಾಡಿದರು.

ಶತಮಾನಗಳಿಂದ “ಅಮೆರಿಕನ್ ಡ್ರೀಮ್” ಎಂಬ ಹೊಂಗನಸನ್ನು ಹುಡುಕುತ್ತಾ, ಕೋಟ್ಯಾಂತರ ಮಂದಿ ಈ “ಬೆಟ್ಟದ ಮೇಲಿನ ಹೊಳೆಯುವ ನಗರ”ವನ್ನು ತಲುಪಿದ್ದಾರೆ. ಅರಿಜ಼ೋನದ ಬಿಸಿಲಿನ ತಾಪಕ್ಕೆ ಶವವಾದಾಗ ಏಳು ವರ್ಷವೂ ತುಂಬಿರದ ಗುರುಪ್ರೀತ್ ಕೌರ್ ಹುಡುಕುತ್ತಿದ್ದುದು ಕೇವಲ ಒಂದು ಗುಟುಕು ನೀರಿಗೆ ಮಾತ್ರ.