ಚಂಡೆಯ ಪೆಟ್ಟಿನ ಗಟ್ಟಿಗಿತ್ತಿ ದಿವ್ಯಶ್ರೀ ಎಸ್ ರಾವ್

0
78

ಮಧುರಾಣಿ ಎಚ್ ಎಸ್
madhuhs2015@gmail.com

ಬಾಹ್ಯಾಕಾಶವನ್ನೂ ಬಿಡದೇ ಹೆಣ್ಣು ಆವರಿಸಿಕೊಂಡಿರುವ ಈ ಕಾಲದಲ್ಲಿ ಅವಳ ಈ ವಿಪುಲ ಬೆಳವಣಿಗೆಗೆ ಸಮುದಾಯ ಸಿಕ್ಕಾಪಟ್ಟೆ ಕೊಡುಗೆ ನೀಡಿದೆ, ನಾವು ಈ ಮಟ್ಟಿಗೆ ನಾಗರಿಕರಾಗಿದ್ದೀವಿ ಎನ್ನುವ ಭ್ರಮೆಯೇನಾದರೂ ನಿಮಗೆ ಹುಟ್ಟಿದ್ದಲ್ಲಿ ಸ್ವಲ್ಪ ತಡೆಯಿರಿ. ಮೊದಲು ಮಲೆನಾಡ ಸೆರಗಿನಲ್ಲಿ ಹುಟ್ಟಿ ಬೆಳೆದು ಅಪ್ರಯತ್ನವಾಗಿ ಹೆಸರು ಮಾಡಿರುವ ಈ ಬೆರಗುಗಂಗಳ ಹುಡುಗಿಯ ಕತೆ ಕೇಳಿ. ಹೆಣ್ಣು ಮಗು ಕ್ರಿಕೆಟ್ ಬ್ಯಾಟ್, ಷಟಲ್, ಕಡೆಗೆ ಸ್ಟೇರಿಂಗ್ ಹಿಡಿದಾಗಲೂ ಅವಳನ್ನು ನೋಡಿ ನಕ್ಕ ಜನ ನಾವು. ಅದರಲ್ಲಿ ಈ ಹುಡುಗಿ ಮುಟ್ಟಿದ್ದು ಗಂಡುಕಲೆಯಾದ ಯಕ್ಷಗಾನಕ್ಕೆ ರಂಗೇರಿಸುವ ಗಂಡಸರು ಬಿಟ್ಟು ಹೆಂಗಸರು ಎಂದೂ ಕೈಯಿಡದ ‘ಚಂಡೆ’ ಎಂಬ ಬಹು ವಿಶಿಷ್ಟ ವಾದ್ಯವನ್ನು. ನಾಲ್ಕನೇ ಕ್ಲಾಸಿನ ಪುಟ್ಟ ದಿವ್ಯ ತನ್ನಪ್ಪ ನಾರಾಯಣ್ ನಾಯಕರವರು ಚಂಡೆ ತರಗತಿಗಳನ್ನು ನಡೆಸುವಾಗ ತಾನೂ ಬೆರಗಿನಿಂದ ಕೂತು ನೋಡುತ್ತಾ ಕಡೆಗೆ ಎಲ್ಲರಿಗಿಂತ ಮೊದಲು ತಾನೇ ಪಾಠಗಳನ್ನು ಒಪ್ಪಿಸುತ್ತಿತ್ತು. ಹೀಗೆ ಚಂಡೆಗೆ ಒಲವು ತೋರಿದ ಮಗಳ ಕಲಾಪ್ರೀತಿಯನ್ನು ಚಿವುಟದೇ ಅವಳ ಕಲಿಕೆಯ ಹಸಿವಿಗೆ ತಂದೆ ಗುರುವಾಗಿ ನಿಂತು ನೀರೆರೆದರು. ಆರೇ ತಿಂಗಳಲ್ಲಿ ಪುಟಾಣಿ ದಿವ್ಯ ಚಂಡೆಯನ್ನು ವೇದಿಕೆಯಲ್ಲಿ ನುಡಿಸುವಷ್ಟರ ಮಟ್ಟಿಗೆ ತಯಾರಾಗಿಬಿಟ್ಟಳು. ಮೊದಲ ಕಾರ್ಯಕ್ರಮ ಕೊಡಲು ಹೋದಾಗ ನಕ್ಕವರೂ, ಈ ಹುಡುಗಿ ನುಡಿಸುವುದಾದರೆ ತಾವು ವೇದಿಕೆ ಹತ್ತುವುದೇ ಇಲ್ಲವೆಂದು ಗುಡುಗಿದ ಪಂಡಿತರೂ ದಿವ್ಯಾ ನೆನಪಲ್ಲಿ ಇನ್ನೂ ಹಸಿಹಸಿ. ಆದರೆ ಮುಂದೊಂದು ದಿನ ಅವರೇ ಈ ಪುಟಾಣಿಯ ಬೆನ್ನು ತಟ್ಟಿ ಭೇಷ್ ಎಂದಾಗಿನ ಸಂತಸ ಈಗ ದಿವ್ಯಾ ಸೊತ್ತು. ನಿಲ್ಲಲಾಗದೇ ಕೂತು ಚಂಡೆ ನುಡಿಸಿದ್ದನ್ನು ಅವರು ಈಗಲೂ ನೆನೆದು ನಗುತ್ತಾರೆ. ಸುಮಾರು ಎಂಟೊಂಭತ್ತು ಕೆ.ಜಿ. ತೂಗುವ ಚಂಡೆಯನ್ನು ಮಗುವು ಎತ್ತಿ ಹಿಡಿಯಲಾರದೇ ಕುಳಿತೇ ನುಡಿಸುತ್ತಿದ್ದರೆ ಆಶ್ಚರ್ಯ ಹಾಗೂ ಸಂತಸದಿಂದ ಕೆಲವರು ನೋಡುತ್ತಿದ್ದರೆ ಅತ್ತ ಕೆಲವರು ಬುದ್ಧಿಯಿಲ್ಲದೇ ಹೆಣ್ಣುಮಗುವೊಂದಕ್ಕೆ ಚಂಡೆಯಂತಹ ಪ್ರಚಂಡ ವಾದ್ಯವನ್ನು ಕಲಿಸಿ ನಲಿಯುತ್ತಿರುವ ತಂದೆಯನ್ನು ಮೂದಲಿಸುತ್ತಾ ಅಡ್ಡಗೋಣು ಹಾಕುತ್ತಾ ಕೂತಿದ್ದ ನೆನಪನ್ನು ಮುಂದಿಡುತ್ತಾ ಆಗೆಲ್ಲಾ ಅನ್ನುವವರ ಬಾಯಿಗೆ ಕಿವುಡಾಗಿದ್ದ ಅಪ್ಪ ಅಮ್ಮ, ಶಾಲೆಗೆ ಹೋಗಲಾಗದೇ ತರಗತಿಗಳನ್ನು ಹೇಗೋ ತೂಗಿಸೊಕೊಡುತ್ತಿದ್ದ ಅಕ್ಕ ನೀಡಿದ ನೈತಿಕ‌ಧೈರ್ಯವೇ ನನ್ನ‌ ಅದೃಷ್ಟವೆನ್ನುತ್ತಾರೆ.

ಹೆಣ್ಣು ಎಂದರೆ ಹೀಗೇ ಎಂಬ ಕಲ್ಪನೆ ಯಾರಿಗೆ ಯಾವಾಗ ಹೇಗೆ ಬಂದು ಅವಳು ಹೀಗೇ ಇರಬೇಕೆಂಬ ಟಿಪ್ಪಣಿ ಬರೆದರೋ ಅವಳು ‘ಮೃದೂನಿ ಕುಸುಮಾದಪಿ’ ಎಂದೇ ಬಗೆವ ನಮಗೆ ಈ ಎಂಟು ಕೆ.ಜಿ.ಭಾರದ ಚಂಡೆಯನ್ನು ಗಂಟೆಗಟ್ಟಲೇ ಭುಜಕ್ಕೆ ನೇತು ಹಾಕಿಕೊಂಡು ಲಯ ತಪ್ಪದೇ ಯಕ್ಷಗಾನದ ಕಳೆಯೇರಿಸುವ ಈ ಹುಡುಗಿ ಅಚ್ಚರಿಯೇ ಆಗುವಳು. ಪ್ರಪ್ರಥಮ ಮಹಿಳಾ ಚಂಡೆ ವಾದಕಿಯೆಂಬ ಹೆಮ್ಮೆಯ ಗರಿ ಮುಡಿಗೇರಿಸಿಕೊಂಡಿರುವ ಶ್ರೀಮತಿ ದಿವ್ಯಶ್ರೀ ಎಸ್ ರಾವ್ ಕರುನಾಡಿನ ಗರ್ವದ ಸಾಧಕಿ. ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಈಗಾಗಲೇ ತಮ್ಮದಾಗಿಸಿಕೊಂಡಿರುವ ಈಕೆ ಇದೇ ಕ್ಷೇತ್ರದಲ್ಲೇ ಅಗಣಿತವನ್ನು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಯಾರೋ ಗಟ್ಟಿಗಿತ್ತಿಯೊಬ್ಬಳು ಏನಾದರೂ ಹೊಸತು ಮಾಡುವೆನೆನ್ನುವಾಗ ನಾವು ಅವರನ್ನು ಅಸೂಯೆ ಮೆತ್ತಿದ ಆಶ್ಚರ್ಯದ ಕಣ್ಣುಗಳಲ್ಲಿ ಸ್ವಲ್ಪ ಅನುಮಾನವನ್ನೂ ಸೇರಿಸಿ ನೋಡುವೆವು. ಇಲ್ಲಿ ಈ ಹುಡುಗಿ ಯಕ್ಷಗಾನದ ಧೀಂಗಿಣಕ್ಕೂ(ಆಳ್ವಾಸ್ ನುಡಿಸಿರಿಯಲ್ಲಿ) ಜಗ್ಗದೇ ಕುಗ್ಗದೇ ಗಂಟೆಗಟ್ಟಲೇ ಚಂಡೆ ನುಡಿಸುವಾಗ ಇಂತಹದೇ ಹೊಟ್ಟೆಕಿಚ್ಚು ಅವಮಾನ ಹಗುರ ಟೀಕೆಗಳು ಇವಳನ್ನೂ ಕಾಡದಿರಲಿಲ್ಲ. ಯಾವುದಕ್ಕೂ ಹೆದರದೇ ಪ್ರತಿ ತಪ್ಪನ್ನೂ ಗೆಲುವಿಗೆ ಸೋಪಾನ ಮಾಡಿಕೊಂಡ ಈಕೆ ಇಂದಿನ ಹೆಣ್ಣಿಗೆ ಹೇಳುವುದು ಅದೇ ಕಿವಿಮಾತು. ಆಳ್ವಾಸ್ ನ ಹೆಮ್ಮೆಯಾಗಿದ್ದ ದಿವ್ಯಾ ಅಲ್ಲಿ ಕೆಲಕಾಲ ಪ್ರಾಧ್ಯಾಪಕಿಯೂ ಆಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮ ನೀಡಿರುವ ಈಕೆ ಮದ್ದಳೆಯನ್ನೂ ನುಡಿಸುತ್ತಾರೆ. ಆದರೂ ಚಂಡೆಯ ಮೇಲೆಯೇ ವಿಶೇಷ ಪ್ರೀತಿ ತೋರಿಸುವ ಈಕೆ ಮೃದಂಗವನ್ನೂ ನುಡಿಸಬಲ್ಲರು. ೨೦೧೬ರ ಮೈಸೂರು ದಸರಾ ಮುಖ್ಯವೇದಿಕೆಯಲ್ಲಿ ಬಿ.ಜಯಶ್ರೀ ಅಮ್ಮನೊಂದಿಗೆ ತಾನು ಹಾಗೂ ಪತಿ ನಡೆಸಿಕೊಟ್ಟಿದ್ದ ಜುಗಲ್ ಬಂದಿಯನ್ನು ತನ್ನ ಮೆಚ್ಚಿನ ಪರ್ಫಾರ್ಮೆನ್ಸ್ ಅಂತಾರೆ.

ಇಡೀ ಕರುನಾಡೇ ಏನು ಇತರ ದೇಶಗಳೂ ತಮ್ಮನ್ನು ಗುರುತಿಸಿ ಸನ್ಮಾನಿಸುವಾಗ ತಂದೆ ಮಾತ್ರ ಇದುವರೆಗೂ ಎಷ್ಟೇ ಚೆಂದಗೆ ಚೆಂಡೆ ನುಡಿಸಿದ್ದರೂ ತುಂಬಾ ಚೆನ್ನಾಗಿತ್ತೆಂದು ಒಮ್ಮೆಯೂ ಮೆಚ್ಚಿಕೊಳ್ಳದೇ ಪ್ರತಿಬಾರಿ ಏನಾದರೊಂದು ಸುಧಾರಣೆಯನ್ನು ಮಾತ್ರವೇ ಹೇಳುತ್ತಾ ದಿವ್ಯಾರ ಪಾಲಿಗೆ ಅಚ್ಚರಿಯೇ ಆಗಿ ಉಳಿದಿದ್ದಾರೆ. ಹೆಚ್ಚಿನ ತರಬೇತಿಗಾಗಿ ಪುತ್ತೂರಿನಿಂದಾಚೆ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಮನೆಯಲ್ಲೇ ಉಳಿಸಿ ಕಲಿಯುವಂತೆ ಪ್ರೇರೇಪಿಸಿದ ತಂದೆಯೇ ಯಾವಾಗಲೂ ರೋಲ್ ಮಾಡೆಲ್ ಎನ್ನುವ ದಿವ್ಯಾ ತನ್ನ ಕುಟುಂಬವೇ ತನ್ನ ಬಹುದೊಡ್ಡ ಶಕ್ತಿ ಎನ್ನುತ್ತಾರೆ. ಪತಿ ಸುಬ್ರಹ್ಮಣ್ಯ ರಾವ್ ಜೊತೆಗಿನ ದಾಂಪತ್ಯಗೀತೆಯನ್ನು ಬಹು ಪ್ರೀತಿಯಿಂದ ಮೆಚ್ಚಿಕೊಳ್ಳುವ ಜಿಂಕೆಗಂಗಳ ಈ ಚೆಲುವೆ, ತಂದೆ ತಾಯಿಯಷ್ಟೇ ಪ್ರೀತಿಸುವ, ಕಲೆಗಾರನಾಗಿ ಮಾರ್ಗದರ್ಶಕನೂ ಆಗಿರುವ ಪತಿಗೆ ‘ತಾನೂ ಹಾಗೂ ಮಗಳು ಆರೋಹಿಯೂ ಎರಡು ಪುಟ್ಟ ಮಕ್ಕಳಂತೆ’ ಎಂದು ನಗುತ್ತಾರೆ. ಮುಂಗೋಪಿ ಹುಡುಗ ಪ್ರೀತಿಯ ಗುರುವಾಗುವ ಪರಿಯೇ ಇಷ್ಟ ಎನ್ನುತ್ತಾರೆ. ಗಂಡನೇ ಹುಟ್ಟು ಹಾಕಿರುವ ಸಂಸ್ಥೆ ‘ಲಯರಂಗ’ದ ಸೂರಿನಡಿಯಲ್ಲಿ ಚಂಡೆ ತರಗತಿಗಳನ್ನು ನಡೆಸುವ ದಿವ್ಯಾಗೆ ಈಗ ಶಿಷ್ಯರ ಗುಂಪೇ ಇದೆ. ತಾವು ಒಬ್ಬ ಗುರುವಿನ ಶಿಷ್ಯಳಾಗಿ ಕಲಿತು ಇನ್ನೂ ಸರಿಸುಮಾರು ಒಂದು ದಶಕವಷ್ಟೇ ಕಳೆದಿರುವಾಗಲೇ ದಿವ್ಯಾರ ಬಳಿ ಚಂಡೆ ಕಲಿಯುತ್ತಿರುವ ಶಿಷ್ಯರಿಗೆ ಕಮಿಟ್ ಮೆಂಟ್ ಇನ್ನೂ ಸಾಲದು, ಸೀರಿಯಸ್ನೆಸ್ ಇರಬೇಕು, ವಿದ್ಯೆಗೆ ದಕ್ಕಬೇಕಾದ ಬೆಲೆ ದಕ್ಕಲೇಬೇಕು ಎಂದೆಲ್ಲಾ ಹೇಳಿಕೊಡುವ ದಿವ್ಯಾರನ್ನು ನೋಡುವಾಗ ಯಾವುದೇ ವಿದ್ಯೆಯಾಗಲೀ ಅದನ್ನು ಆರಾಧಿಸಿ ಕಲಿವ ಶಿಷ್ಯ/ಷ್ಯೆಗೆ ಇರಬೇಕಾದ ತಾಕತ್ತೇನೆಂದು ಅರಿವಾಗುತ್ತದೆ.

 

 

 

 

 

 

 

ಮಹಿಳಾ ಯುವ ಸಾಧಕಿಯರಿಗೆ ನಿಮ್ಮ‌ ಕಿವಿಮಾತೇನು ಎಂದರೆ ‘ಧೃತಿಗೆಡಬಾರದು ಅಕ್ಕಾ.. ಹೆಣ್ಣನ್ನು ಹಿಂದೆಳೆಯಲು ಅವಳ ಚಾರಿತ್ರ್ಯವಧೆ ಬಿಟ್ಟು ಬೇರೇನು ಮಾಡಲು ಸಾಧ್ಯ? ಸಾಧಿಸುವ ಛಲ ಬಿಟ್ಟು ಬೇರೇನೂ ಯೋಚಿಸಬಾರದು.” ಎನ್ನುತ್ತಾರೆ. ಚಂಡೆ ಕಲಿಯುವ ಆಸಕ್ತಿಯಿರುವವರು ತಮ್ಮನ್ನು ಧಾರಾಳವಾಗಿ ಸಂಪರ್ಕಿಸಬಹುದು ಎಂದು ಹೇಳಿ ಗುಳಿ ಕೆನ್ನೆಗಳಲ್ಲಿ ನಗು ತುಂಬಿಕೊಳ್ಳುತ್ತಾರೆ. ದಿವ್ಯಶ್ರೀಯವರ ಮೇಲ್ ಐಡಿ: divyashreerao6@gmail.com.