ನಮ್ಮ ರೈತರನ್ನೇ ಜ್ಞಾಪಿಸುವ ಇಟಲಿಯ ಈ ಕಾದಂಬರಿ

0
35

ನೂರಾರು ಭಾಷಣಗಳು, ಸಮ್ಮೇಳನಗಳು ಫ್ಯಾಸಿಸಮ್‌ವನ್ನು ವಿವರಿಸಲು ತಿಣಕಿ ಸೋತಾಗ ಈ ಒಂದು ಕಾದಂಬರಿ ಅದನ್ನು ಸಾಧಿಸಿತು. ಎಲ್ಲಾ ದೇಶದ ಎಲ್ಲಾ ಪ್ರಭುತ್ವಗಳು ತುಳಿಯುವುದು ರೈತರನ್ನೇ ಎನ್ನುವ ಸತ್ಯವನ್ನು ಫೊಂತಮಾರಾದ ಜನ ನಮಗೆ ನೆನಪಿಸುತ್ತಲೇ ಇರುತ್ತಾರೆ. ಈ ಕಾದಂಬರಿಯನ್ನು ಕು.ಶಿ.ಹರಿದಾಸಭಟ್ಟರು ಅದೆಷ್ಟು ಅದ್ಭುತವಾಗಿ ಅನುವಾದಿಸಿದ್ದಾರೆಂದರೆ ಅದು ಅಪ್ಪಟ ಕನ್ನಡ ಕಾದಂಬರಿಯಂತಿದೆ.

ರಾಜೇಂದ್ರ ಚೆನ್ನಿ
rajendrachenni@gmail.com

ಫೊಂತಮಾರಾ ಎಂಬ ಈ ಇಟಾಲಿಯನ್ ಹಳ್ಳಿಯ ಜನರನ್ನು ನಾನಂತೂ ಎಂದು ಮರೆಯಲಾರೆ. ಕುವೆಂಪು ಅವರ ಕಾದಂಬರಿಗಳ ಪಾತ್ರಗಳಂತೆ ಇವರು ನನ್ನ ಮನಸ್ಸಿನ ಕಾಯಂ ನಿವಾಸಿಗಳಾಗಿಬಿಟ್ಟಿದ್ದಾರೆ. ಅವರು ಸಾಮಾನ್ಯರಲ್ಲೇ ಅತಿ ಸಾಮಾನ್ಯರು. ಇಟಲಿಯ ದಕ್ಷಿಣದಲ್ಲಿದ್ದ ಅಬ್ರುಜಿ ಪ್ರಾಂತದ ಸಣ್ಣ ಹಳ್ಳಿಯ ನಾಗರೀಕರು. ಬಡತನವನ್ನು ಬಿಟ್ಟು ಇನ್ನೇನನ್ನು ನೋಡದವರು. ಕೆಲವರು ತಮ್ಮ ಅಂಗೈ ಅಗಲದ ಹೊಲಗಳಲ್ಲಿ ದುಡಿದರೆ ಉಳಿದವರು ಪಕ್ಕದ ಫುಸೀನೋ ಭುಮಿಯನ್ನು ಉಳುವವರು. ಒಂದಿಬ್ಬರನ್ನು ಬಿಟ್ಟರೆ ಪಟ್ಟಣವನ್ನೇ ನೋಡದವರು. ಇವರಲ್ಲಿ ಮಹಾಜಗಳಗಂಟರು, ತರಲೆಗಳು, ಕುಡುಕರು, ಗಂಡ ತೀರಿಹೋದಮೇಲೆಯೂ ಅವನು ಸ್ವರ್ಗದಿಂದಲೇ ನಾಲ್ಕು ಮಕ್ಕಳನ್ನು ದಯಪಾಲಿಸಿದ್ದಾನೆಂದು ಹೇಳುವ ಹೆಂಗಸು, ತನ್ನ ಪ್ರೀತಿಯನ್ನು ಹೇಳಿಕೊಳ್ಳಲಾಗದೇ ಅವನು ಸತ್ತು ಹೋದ ಮೇಲೆ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಳ್ಳುವವಳು- ಹೀಗೆ ಮನುಷ್ಯ ಜಗತ್ತಿನ ಎಲ್ಲಾ ಓರೆಕೋರೆಗಳಿರುವ ಮತ್ತು ಆದ್ದರಿಂದಲೇ ನಮ್ಮ ಪ್ರೀತಿಯನ್ನು ಪಡೆಯುವ ವ್ಯಕ್ತಿಗಳು ಇಲ್ಲಿದ್ದಾರೆ. ಕೆಲವರು ಈಗಲೂ ಇಟಲಿಯನ್ನು ಮಹಾರಾಜರೇ ಆಳುತ್ತಿದ್ದಾರೆಂದು ನಂಬಿದ್ದಾರೆ. ಪ್ರಾಯಶಃ ಭಾರತದ ಲಕ್ಷಾನುಲಕ್ಷ ಹಳ್ಳಿಗಳಂತೆ ಈ ಹಳ್ಳಿಯೂ ಕಾಲದ ಧೂಳಿನಲ್ಲಿ ಹೆಸರಿಲ್ಲದೆ ಮರೆಯಾಗಿ ಹೋಗುತ್ತಿತ್ತು. ಆದರೆ ಈ ಕಾಲವು ೧೯೨೦ರ ನಂತರದ ಇಟಲಿಯಲ್ಲಿ ರೂಪತಳೆದ ಫಾಸಿಸಮ್‌ನ ಕಾಲ. ಚರಿತ್ರೆಯೆನ್ನುವ ಸುಂಟರಗಾಳಿಯು ಈ ಹಳ್ಳಿಯನ್ನು ಹುಡುಕಿಕೊಂಡು ಬರುತ್ತದೆ. ಅನಕ್ಷರಸ್ಥರೂ ಮುಗ್ಧರು ಆದ ಫೊಂತಮಾರಾದ ಹಳ್ಳಿಗರು ವಿದ್ಯುಚ್ಛಕ್ತಿ ಬಿಲ್ ಕಟ್ಟಿಸಿಕೊಳ್ಳಲು ಬಂದವನನ್ನು ಓಡಿಸಿಬಿಡುತ್ತಾರೆ. ಹಳ್ಳಿ ಕತ್ತಲೆಯಲ್ಲಿ ಮುಳುಗುತ್ತ್ತದೆ. ಆಮೇಲೆ ಬಂದವನೊಬ್ಬ ಖಾಲಿ ಹಾಳೆಯ ಮೇಲೆ ಅವರ ಸಹಿಗಳನ್ನು ಪಡೆಯುತ್ತಾನೆ. ಅವರು ಸಹಿ ಮಾಡಲು ಕಾರಣವೆಂದರೆ ಅದಕ್ಕೆ ದುಡ್ಡು ಕೊಡಬೇಕಾಗಿಲ್ಲ ಮತ್ತು ಹೊಸ ಯಾವುದೇ ತೆರಿಗೆ ಇಲ್ಲ! ಆದರೆ ಅವರಿಗೆ ಗೊತ್ತಾಗದಿದ್ದರೂ ಜಗತ್ತು ಬದಲಾಗಿದೆ. ಸರಕಾರವು ಬದಲಾಗಿದೆ. ಅವರಿಗೆ ಪರಿಚಿತನಾದ ಜಮೀನ್ದಾರನು ಈಗ ಶ್ರೀಮಂತರು ಹಾಗೂ ಫ್ಯಾಸಿಸ್ಟರ ಜೊತೆಗೆ ಶಾಮೀಲಾಗಿದ್ದಾನೆ. ಅವನ ಜೊತೆಗಿರುವ ಕಂಟ್ರ್ಯಾಕ್ಟರ್‌ನಂತೂ ಬದಲಾದ ವ್ಯವಸ್ಥೆಯಲ್ಲಿ ರೈತಸಮುದಾಯವನ್ನು ದೋಚುತ್ತಿದ್ದಾನೆ. ಖಾಲಿ ಹಾಳೆಯ ಮೇಲೆ ಸಹಿಮಾಡಿದ್ದರ ಪ್ರಕಾರ ಫೊಂತಮಾರಾದ ಜನರು ಅವರ ಹೊಲಗಳಿಗೆ ನೀರು ತರುತ್ತಿದ್ದ ತೊರೆಯ ದಿಕ್ಕನ್ನು ಬದಲಾಯಿಸಿ ಕಾಂಟ್ರಾಕ್ಟರ್‌ನ ಭೂಮಿಗೆ ನೀರು ಬಿಡಲು ಒಪ್ಪಿದ್ದಾರೆಂದು ಹೇಳಿದ್ದು ಕೇಳಿ ರೊಚ್ಚಿಗೆದ್ದ ಹಳ್ಳಿಯ ಹೆಂಗಸರು ಪಟ್ಟಣಕ್ಕೆ ಅಹವಾಲು ಕೊಡಲು ಬರುತ್ತಾರೆ. ಅಲ್ಲಿ ಇವರಿಬ್ಬರು ಮಹಾಶಯರಿಗೆ ಹೊಸ ಪದವಿಗಳು ಬಂದಿವೆ. ಫೊಂತಮಾರಾ ಜನರನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುವ ವಕೀಲ ಇಬ್ಬರಿಗೂ ೨/೩ ರಷ್ಟು ಸಮಾನವಾದ ನೀರು ಎಂದು ನಿರ್ಣಯ ನೀಡಿದಾಗ ಅಂಕಗಣಿತವು ಬರದ ಮಹಿಳೆಯರು ಸಮಾಧಾನದಿಂದ ವಾಪಸ್ಸಾಗುತ್ತಾರೆ. ಹಾಗೆಯೇ ಎಲ್ಲರು ಉಳುತ್ತಿದ್ದ ಫುಸೀನೋ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ಹೆಚ್ಚು ಕಡಿಮೆ ಅನಾಮಧೇಯವಾಗಿದ್ದ ಹಳ್ಳಿಯಲ್ಲಿ ಫ್ಯಾಸಿಸ್ಟ್ ರಾಜಕೀಯ ಪ್ರವೇಶಮಾಡಿದೆ. ಪಟ್ಟಣಗಳಲ್ಲಿ, ನಗರಗಳಲ್ಲಿ ಕಪ್ಪುಅಂಗಿಯವರು (black shirts) ಮುಸೋಲಿನಿ ಕೊಟ್ಟ ಕಪ್ಪು ಅಂಗಿ ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ಪ್ರದರ್ಶನಗಳನ್ನು ಮತ್ತು ಹಿಂಸೆಯನ್ನು ಮುಕ್ತವಾಗಿ ನಡೆಸುತ್ತಿದ್ದಾರೆ. ಜಮೀನ್ದಾರರು, ಕಂಟ್ರ್ಯಾಕ್ಟರರು, ಆಡಳಿತಗಾರರು ದಿನಕ್ಕೊಂದು ಹೊಸ ಕಾನೂನನ್ನು ತರುತ್ತ ಜನರ ಸ್ವಾತಂತ್ರ್ಯವನ್ನು ಕದಿಯುತ್ತಿದ್ದಾರೆ. ಪ್ರಶ್ನೆ ಮಾಡುವವರನ್ನು ಜೈಲಿಗೆ ಹಾಕಿ ಚಿತ್ರಹಿಂಸೆ ಕೊಡುತ್ತಿದ್ದಾರೆ. ಇದರಲ್ಲಿ ಕಾದಂಬರಿಯ ನಾಯಕನೆನ್ನಬಹುದಾದ ಬರಾರ್ಡೋ ವಿಯೋಲಾ ಕೂಡ ಸೇರಿದ್ದಾನೆ. ದೈತ್ಯ ಕಾಯದ, ಮಗುವಿನ ಮುಖದ ಮುಂಗೋಪಿಯದ ಬರಾರ್ಡೋ ರೈತರಿಗೆ ಕಿರಿಕಿರಿಯಾದಾಗ ತನ್ನದೇ ರೀತಿಯಲ್ಲಿ ವಿರೋಧಿಸುತ್ತಾನೆ. ಹಳ್ಳಿಗೆ ವಿದ್ಯುಚ್ಛಕ್ತಿ ನಿಲ್ಲಿಸಿದಾಗ ಹಳ್ಳಿಯ ರಸ್ತೆಗಳ ಎಲ್ಲಾ ಬಲ್ಬುಗಳನ್ನು ಎಲ್ಪಿರಾ ಒಡೆದುಬರುತ್ತಾನೆ. ಹಳ್ಳಿಯ ಸುಂದರಿಯಾದ ಎಲ್ಪಿರಾಳನ್ನು ಅಗಾಧವಾಗಿ ಪ್ರೀತಿಸುವ ಆದರೆ ಅವಳಿಗೆ ಅದನ್ನು ಹೇಳಲಾಗದ ಅವನು ತನಗೆ ಭೂಮಿಯಿಲ್ಲದ್ದರಿಂದ ಬೇರೆ ದೇಶದಲ್ಲಿ ದುಡಿದು ಅವಳನ್ನು ಮದುವೆಯಾಗಲು ಲಾಯಕ್ಕಾಗಲು ನಗರಕ್ಕೆ ಬರುತ್ತಾನೆ. ಅವನ ಭೂಮಿಯನ್ನು ಕೊಂಡುಕೊಂಡ ಜಮೀನ್ದಾರ ಮೋಸಮಾಡಿದ್ದಾನೆ. ನಗರದಲ್ಲಿ ಗೊತ್ತಾಗುತ್ತೆ ಈಗ ಬೇರೆ ದೇಶಕ್ಕೆ ಹೋಗಲು ರಹದಾರಿ ಕೊಡುವ ಕ್ರಮವೇ ಬೇರೆಯಾಗಿದೆ. ಈ ಕಾದಂಬರಿಯಲ್ಲಿ ಪಟ್ಟಣಿಗರು ಹಾಗೂ ನಗರವಾಸಿಗಳೆಂದರೆ ಪ್ರತಿಯೊಬ್ಬರು ದಗಲ್ಬಾಜಿಗಳು, ರೈತರ ಶತುಗಳು. ಅಲ್ಲಿಯ ವಕೀಲ, ಅಧಿಕಾರಿ ಎಲ್ಲರೂ ಅವನಿಗೆ ಮೋಸಮಾಡುತ್ತಾರೆ. ಆದರೆ ಆಕಸ್ಮಾತ್ತಾಗಿ ಅವನನ್ನು ಭೇಟಿಯಾದ ಗುಪ್ತ ಕ್ರಾಂತಿಕಾರಿಯೊಬ್ಬನು ನಡೆಯುತ್ತಿರುವ ಹೊಸ ರಾಜಕೀಯವನ್ನು ಅವನಿಗೆ ವಿವರಿಸುತ್ತಾನೆ. ಆದರೆ ಅಷ್ಟರಲ್ಲಿ ಬರಾರ್ಡೋನನ್ನು ಬಂಧಿಸಿ ಜೈಲಿನಲ್ಲಿ ಚಿತ್ರಹಿಂಸೆ ಕೊಡುತ್ತಾರೆ. ಆ ಗುಪ್ತ ಕ್ರಾಂತಿಕಾರಿಯನ್ನು ಉಳಿಸುವುದಕ್ಕಾಗಿ ತಾನೇ ಆತನೆಂದು ಹೇಳಿಕೊಂಡು ಬರಾರ್ಡೋ ಬಲಿಯಾಗುತ್ತಾನೆ.

ಫೊಂತಮಾರಾ ಹಳ್ಳಿಯ ಜನರ ತರಲೆಗಳು ತಮಾಶೆಗಳು ಕ್ರಮೇಣವಾಗಿ ದುರಂತದ ನೆರಳಿಗೆ ಬರುತ್ತವೆ. ರೈತರ ಶತುಗಳು ಹೊರದೇಶದವರಲ್ಲ. ಎಲ್ಲರೂ ಪರಿಚಿತರೆ. ಫ್ಯಾಸಿಸ್ಟ್ ಕಪ್ಪುಅಂಗಿಯವರೂ ರೈತಾಪಿ ಕುಟುಂಬದಿಂದ ಬಂದವರೆ. ಆದರೆ ರೈತರ ಭೂಮಿ, ನೀರು ಎಲ್ಲವನ್ನೂ ಶ್ರೀಮಂತರಿಗೆ ಹಂಚುವ ಪ್ರಭುತ್ವವು ಈ ಬಡಪಾಯಿಗಳಲ್ಲಿ ರಾಷ್ಟ್ರ, ನಾಯಕ, ಅಭಿವೃದ್ಧಿ ಇಂತ ಭ್ರಮೆಗಳನ್ನು ಬಿತ್ತಿ ಬೆಳೆಸಿದೆ. ಅಲ್ಲದೆ ಅವರಲ್ಲಿ ದ್ವೇಷ ಹಾಗೂ ಹಿಂಸೆಗಳ ಭಾವನೆಗಳನ್ನು ಹುಟ್ಟಿಸಿದೆ. ಇದಕ್ಕೆ ಬಲಿಯಾಗುವವರು ರೈತರು ಮತ್ತು ಕಾರ್ಮಿಕರು. ಕಾದಂಬರಿಯಲ್ಲಿ ಫೊಂತಮಾರಾ ಹಳ್ಳಿಯ ಮೇಲೆ ದಾಳಿಮಾಡಿ ಅಲ್ಲಿಯ ಹೆಂಗಸರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುವವರೂ ಕೂಡ ಫ್ಯಾಸಿಸಮ್‌ನ ಕಾಲಾಳುಗಳೇ. ಕ್ರಾಂತಿಕಾರಿಗಳಿಂದ ಪ್ರತಿಭಟನೆಯ ಪಾಠಕಲಿತ ಈ ಹಳ್ಳಿಯ ಜನ ತಮ್ಮ ಹಳ್ಳಿಗೇ ಮುದ್ರಣಯಂತ್ರವನ್ನು ತಂದು ಒಂದು ಪತ್ರಿಕೆಯನ್ನು ಆರಂಭಿಸುತ್ತಾರೆ. ಅದರ ಹೆಸರು ಏನು ಮಾಡುವುದು? (Che Fera?). ಆದರೆ ಇಷ್ಟರಲ್ಲಿ ಪ್ರಭುತ್ವವು ಕ್ರೂರವಾಗಿದೆ. ಹಳ್ಳಿಯ ದೇಶದ್ರೋಹಿಗಳ ಮೇಲೆ ಶಸ್ತ್ರಗಳಿಂದ ಆಕ್ರಮಣ ಮಾಡುವ ಕಪ್ಪುಅಂಗಿಯವರು, ಸೈನಿಕರು ಕೈಗೆ ಸಿಕ್ಕ ಎಲ್ಲರನ್ನೂ ಗುಂಡಿಕ್ಕಿಕೊಲ್ಲುತ್ತಾರೆ. ಫೊಂತಮಾರಾ ಪಾಳು ಬಿದ್ದ ಅವಶೇಷವಾಗುತ್ತದೆ. ಈ ವಿಷಾದಪೂರ್ಣ ದುರಂತದ ಹಿಂದೆ ಪ್ರತಿಭಟನೆಯ ಅಂಶವೂ ಇದೆ. ಮುಗ್ಧ ಹಳ್ಳಿಗರು ಕ್ರಮೇಣವಾಗಿ ರಾಜಕೀಯದ ಕ್ರೌರ್ಯವನ್ನು ಅರಿತುಕೊಳ್ಳುತ್ತಾರೆ. ಅಲ್ಲದೆ ಪ್ರತಿಭಟನೆಯ ದಾರಿಗಳನ್ನು ಹುಡುಕುತ್ತಾರೆ. ಕಾದಂಬರಿಯ ಶಕ್ತಿ ಇರುವುದು ಅದರ ಅದ್ಭುತವಾದ ಹಾಸ್ಯದಲ್ಲಿ. ಹಳ್ಳಿಯ ಜನ ಊರನ್ನು ಸಿಂಗರಿಸಿ ಹೊಸ ಧರ್ಮಗುರುವಿಗಾಗಿ ಕಾಯುತ್ತಿದ್ದಾರೆ. ಪಟ್ಟಣಿಗರು ಅಲ್ಲಿಗೆ ಕಳಿಸಿಕೊಡುವುದು ಒಂದು ಕತ್ತೆಯನ್ನು! ಆ ಹಳ್ಳಿಯ ಮಾಮೂಲು ಧರ್ಮಗುರು ಬೆಳಗ್ಗಿನಿಂದ ಕುಡಿಯುತ್ತ ಮೂತ್ರಮಾಡಲೂ ಮರದ ಆಸರೆ ಹುಡುಕುತ್ತಾನೆ! ಕಾದಂಬರಿಯ ಹಾಸು ಹೊಕ್ಕಾದ ಅನೇಕ ಕತೆಗಳಲ್ಲಿ ಒಂದು ಹೀಗೆ. ಏಸುಕ್ರಿಸ್ತನು ಬಡರೈತರಿಗೆ ಎಲ್ಲವನ್ನೂ ಕೂಡ ಬಯಸುತ್ತಾನೆ. ಆದರೆ ಮಹಾಧರ್ಮಗುರು ಪೋಪ್‌ನಿಗೆ ಬೇರೆ ಯೋಚನೆ ಇದೆ. ತೆರಿಗೆ ಕಡಿಮೆಮಾಡಿದರೆ ಭೂಮಾಲೀಕರಿಗೆ ಕಷ್ಟ. ರಾಜನಿಗೆ ಕಷ್ಟ. ಹಾಗಿದ್ದರೆ ಏನನ್ನು ಕೊಟ್ಟರೆ ರೈತನು ಯಾವಾಗಲೂ ಎಚ್ಚರವಾಗಿರಬಲ್ಲ? ಬಹಳ ಯೋಚಿಸಿ ಪೋಪ್ ನಿರ್ಧರಿಸುತ್ತಾನೆ ಎಲ್ಲರ ತಲೆಗೂ ಒಂದಷ್ಟು ಹೇನುಗಳನ್ನು ಕೊಟ್ಟರೆ ಅವರು ಎಚ್ಚರವಾಗಿರುತ್ತಾರೆ! ಸ್ವರ್ಗವಾಸಿ ಗಂಡನು ಸ್ವರ್ಗದಿಂದ ಆಶೀರ್ವದಿಸಿದ್ದರಿಂದ ಈಗಲೂ ಮಕ್ಕಳಾಗುತ್ತವೆ ಎಂದು ಹೇಳುವವಳು ಮತ್ತೆ ಮದುವೆಯಾಗುವುದಿಲ್ಲ, ಏಕೆಂದರೆ ಮಾಶಾಸನ ನಿಂತು ಹೋಗುತ್ತದೆ! ಫೊಂತಮಾರಾ ರೈತರ ಪಟ್ಟಿಯ ಪ್ರಕಾರ ಜಗತ್ತಿನ ಶ್ರೇಣಿಯಲ್ಲಿ ದೇವರ ಕೆಳಗೆ ದೊರೆ ಇತ್ಯಾದಿ ಹೀಗೆ ಕೊನೆಗೆ ರೈತರಿದ್ದಾರೆ. ಅವರ ಕೆಳಗೆ ಯಾರೂ ಇಲ್ಲ, ಯಾರೂ ಇಲ್ಲ, ಯಾರೂ ಇಲ್ಲವೇ ಇಲ್ಲ.

ಇಟಾಲಿಯನ್ ಬರಹಗಾರ ಹಾಗೂ ರಾಜಕೀಯ ಚಿಂತಕ, ಆಕ್ಟಿವಿಸ್ಟ್ ಆಗಿದ್ದ ಇತ್ನಾಸಿಯೋ ಸಿಲೋನೆ ಈ ಕಾದಂಬರಿಯನ್ನು ೧೯೩೩, ರಲ್ಲಿ ತಾನು ದೇಶಭ್ರಷ್ಟನಾಗಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇದ್ದಾಗ ಬರೆದ. ವಿವಿಧ ದೇಶಗಳ ಅಂದಾಜು ೨೫ ಪ್ರಕಾಶಕರು ಕೃತಿಯನ್ನು ತಿರಸ್ಕರಿಸಿದರು. ಕಾದಂಬರಿ ಜರ್ಮನ್ ಭಾಷೆಯ ಅನುವಾದದಲ್ಲಿ ಮೊದಲು ಪ್ರಕಟವಾಯಿತು! ಆನಂತರ ೨೭ ದೇಶಗಳ್ಲಿ ೧.೫ ಮಿಲಿಯನ್ ಪ್ರತಿಗಳು ಖರ್ಚಾದವು. ನೂರಾರು ಭಾಷಣಗಳು, ಸಮ್ಮೇಳನಗಳು ಫ್ಯಾಸಿಸಮ್‌ವನ್ನು ವಿವರಿಸಲು ತಿಣಕಿ ಸೋತಾಗ ಈ ಒಂದು ಕಾದಂಬರಿ ಅದನ್ನು ಸಾಧಿಸಿತು. ಎಲ್ಲಾ ದೇಶದ ಎಲ್ಲಾ ಪ್ರಭುತ್ವಗಳು ತುಳಿಯುವುದು ರೈತರನ್ನೇ ಎನ್ನುವ ಸತ್ಯವನ್ನು ಫೊಂತಮಾರಾದ ಜನ ನಮಗೆ ನೆನಪಿಸುತ್ತಲೇ ಇರುತ್ತಾರೆ. ಈ ಕಾದಂಬರಿಯನ್ನು ಕು.ಶಿ.ಹರಿದಾಸಭಟ್ಟರು ಅದೆಷ್ಟು ಅದ್ಭುತವಾಗಿ ಅನುವಾದಿಸಿದ್ದಾರೆಂದರೆ ಅದು ಅಪ್ಪಟ ಕನ್ನಡ ಕಾದಂಬರಿಯಂತಿದೆ.