ನಾನು ಅವನು ಮತ್ತು ಇವನು

0
39

ಅದೆಷ್ಟು ಹಂಬಲಿಸಿದ್ದಳು ಅವನಿಗಾಗಿ, ಅವನ ಪುಟ್ಟ ಸಾಂತ್ವನಕ್ಕಾಗಿ. ಈಗ ಎಲ್ಲ ಮುಗಿದ ಮೇಲೆ, ಓದು ಮುಗಿಸಿ ಒಂದು ಕೆಲಸ ಅಂತ ಗಿಟ್ಟಿಸಿಕೊಂಡ ಮೇಲೆ, ಬದುಕು ಹಳಿಗೆ ಬರುತ್ತಿದೆ ಅಂತ ಅನ್ನಿಸಿಕೊಂಡ ಮೇಲೆ ಮತ್ತೆ ಬರುತ್ತಿದ್ದಾನೆ ಬದುಕಿನೊಳಕ್ಕೆ. ಈಗ ಬದುಕಿನಲ್ಲಿ ಯಾವ ಕೋಲಾಹಲವೇಳಲಿದೆಯೋ ಯಾರಿಗೆ ಗೊತ್ತು? ಅಂದುಕೊಂಡು ಮತ್ತೆ ಕಪ್ ತುಟಿಗಿಟ್ಟುಕೊಂಡಳು. ಕಾಫಿ ತಣ್ಣಗಾಗಿತ್ತು.

ಫಾತಿಮಾ ರಲಿಯಾ
imraliya101@gmail.com

ಮೊನ್ನೆಯಿಂದ ಫೇಸ್ಬುಕ್ ತೆರೆದಾಗೆಲ್ಲಾ ಕಾಡುತ್ತಿದ್ದ ‘ಸ್ವೀಕರಿಸಲೋ ಬೇಡವೋ’ ಎಂಬ ಗೊಂದಲಗಳನ್ನು ಮೀರಿ ಇಂದು ಕನ್ಫರ್ಮ್ ಬಟನ್ ಒತ್ತಿ ಉಸಿರು ಬಿಡುವಷ್ಟರಲ್ಲಿ ಮೆಸೆಂಜರ್ ನಲ್ಲಿ “ಹಾಯ್” ಎಂದು ಸುಮನ್ ಮಾತಿಗೆಳೆದಿದ್ದ.
“ಹಾಯ್”
“ಹೇಳು ಹೇಗಿದ್ದಿಯಾ?”
“ಚೆನ್ನಾಗಿದ್ದೇನೆ, ನೀನು?”
“ಚೆನ್ನಾಗಿದ್ದೇನೇನೋ ಗೊತ್ತಿಲ್ಲ, ನಿನ್ನ ಗೆಳೆತನ ಕಳೆದುಕೊಂಡ ಬದುಕು ಖಾಲಿ ಖಾಲಿ”
“ಎಲ್ಲಿ ಕಳೆದುಕೊಂಡೇ ಇಲ್ಲ, ಅದೆಲ್ಲ ಆ ಒಂದು ಕ್ಷಣದ ಆವೇಶವಷ್ಟೇ” ಎಂದು ಟೈಪಿಸಿದವಳು ಅದನ್ನು ಡಿಲೀಟ್ ಒಂದು ಸ್ಮೈಲಿ ಕಳುಹಿಸಿ ಸುಮ್ಮನಾದಳು. ಆ ಕಡೆಯಿಂದ ಅವನೂ ಸ್ಮೈಲಿ ಕಳುಹಿಸಿದ. ಅದು ವಿಷಾದವೋ, ಖುಶಿಯೋ ಅರ್ಥವಾಗದ ಅವಳು ಮೊಬೈಲ್ ಮುಚ್ಚಿಟ್ಟು ಕಾಫಿ ಕಪ್ ತುಟಿಗಿಟ್ಟುಕೊಂಡಳು.

ಇಷ್ಟು ವರ್ಷ ಎಲ್ಲಿದ್ದ? ಹೇಗಿದ್ದ? ಈಗ ಮತ್ತೆ ನನ್ನ ಗೆಳೆತನ ಬಯಸಿ ಬಂದಿದ್ದಾನಾ? ಮದುವೆ ಮಾಡ್ಕೋತಾನೇನೋ, ಅದಕ್ಕೇ ಕರೆಯೋಕೆ ಮೆಸೇಜ್ ಮಾಡಿದ್ದಾನೇನೋ? ಸುಮ್ಮನೆ ಕ್ಷಮೆ ಕೇಳಿಬಿಡಲಾ? ಅಥವಾ ನಾನೇ ಮುಂದಾಗಿ ‘ನಿನ್ನ ಕ್ಷಮಿಸಿದ್ದೇನೆ’ ಅಂದುಬಿಡಲಾ? ಹಾಗೆ ಹೇಳಲು ಕ್ಷಮಿಸುವಂತಹಾ ಅಥವಾ ಕ್ಷಮಿಸದೇ ಇರುವಂತಹ ತಪ್ಪು ನಡೆದೇ ಇಲ್ಲವಲ್ಲಾ? ಪ್ರಶ್ನೆ ಬೆಳೆದಂತೆ ಬಿಸಿ ಕಾಫಿ ನಾಲಗೆಯನ್ನು ಸುಟ್ಟಂತಾಯಿತು ಜೊತೆಗೆ ಹಳೆಯ ನೆನಪುಗಳೂ.

“ಇಡೀ ದಿನ ಇಲ್ಲೇ ಇರ್ತೀರಲ್ಲಾ, ಬೇಜಾರಾಗಲ್ವಾ? ಯಾರ್ಜೊತೆನೂ ಮಾತಾಡ್ಬೇಕು ಅನ್ನಿಸಲ್ವಾ?” ಕಾಲೇಜು ಲೈಬ್ರರಿಯಲ್ಲಿ ಅವಳೇ ಅವನನ್ನು ಮಾತಿಗೆಳೆದಿದ್ದಳು. ಅವನು ಒಮ್ಮೆ ಅವಳತ್ತ ನೋಡಿ ನಕ್ಕು ಮತ್ತೆ ಪುಸ್ತಕದಲ್ಲಿ ಮುಳುಗಿಹೋಗಿದ್ದ. ಆಗಲೇ ಅವಳು ಅವನ ಮೌನದ ಕೋಟೆಯೊಳಗೆ ಪ್ರವೇಶಿಸಲೇಬೇಕೆಂದು ನಿರ್ಧರಿಸಿಬಿಟ್ಟಿದ್ದಳು. ಮೊದಲು ಮೊದಲು ಎಲ್ಲ ಹುಡುಗಾಟದಂತೆ ಶುರುವಾದದ್ದು ಅವನ ಓದು, ಬದುಕಿನ ಬಗೆಗಿನ ನಿಲುವುಗಳು, ಗಂಭೀರತೆ, ಏಕಾಂತದಲ್ಲಿ ಅವನೊಳಗೆ ಹುಟ್ಟುತ್ತಿದ್ದ ಕೆಲವು ಅಪೂರ್ವ ಯೋಚನೆಗಳು ತಿಳಿದು ಬಂದಂತೆ ಅವಳಿಗೇ ಗೊತ್ತಾಗದಂತೆ ಅವನೆಡೆಗೆ ಗೌರವವೊಂದು ಮೊಳಕೆಯೊಡೆಯುವಂತೆ ಮಾಡಿತ್ತು. ಆ ಗೌರವೇ ಸ್ನೇಹವಾಗಿ, ಸಲಿಗೆಯಾಗಿ ಬಹುವಚನ ಏಕವಚನಕ್ಕೆ ಇಳಿದಿತ್ತು. ಸದ್ದೇ ಆಗದಂತೆ ಒಂದು ಪುಟ್ಟ ಗೆಳೆತನ ಅವರ ಮಧ್ಯೆ ಬೆಳೆಯಿತು. ಮಾತು ಬಾರದಂತಿದ್ದ ಸುಮನ್ ಮಾತು ಕಲಿತದ್ದು ಅವಳ ಗೆಳೆತನದಲ್ಲೇ, ಓದು ಇಷ್ಟವಿಲ್ಲದವಳು ಗಂಟೆಗಟ್ಟಲೆ ಪುಸ್ತಕದಲ್ಲಿ ಮುಳುಗಿಹೋಗುವುದನ್ನು ಕಲಿತದ್ದು ಅವನ ಸಹವಾಸದಲ್ಲೇ.

ಇಡೀ ಕಾಲೇಜು ಅವರಿಬ್ಬರ ಸ್ನೇಹ ಬಗ್ಗೆ ಮಾತಾಡುತ್ತಿದ್ದರೆ ಅವಳ ಬದುಕಲ್ಲಿ ಮತ್ತೊಬ್ಬ ಪ್ರವೇಶಿಸಿದ್ದ. ಅವಳಿಗೇನೋ ಸ್ನೇಹವನ್ನೂ, ಪ್ರೀತಿಯನ್ನೂ ಒಟ್ಟೊಟ್ಟಿಗೆ ತೂಗಿಸಿಕೊಂಡು ಹೋಗಿಯೇನು ಎನ್ನುವ ವಿಶ್ವಾಸವಿತ್ತು. ಆದರೆ ಅವನಿಗೆ ಮಾತ್ರ ಬದುಕಿನಲ್ಲಿ ಶಿಸ್ತೇ ಇಲ್ಲದ ತನ್ನ ಗೆಳತಿ ಮತ್ತು ಶರ್ಟಿನ ಇಸ್ತ್ರಿ ಸಣ್ಣಗೆ ಮುದುರಿದರೂ ಮತ್ತೊಮ್ಮೆ ಇಸ್ತ್ರಿ ಹಾಕಿಕೊಳ್ಳುವ ಅವಳ ಪ್ರೇಮಿ ಗಿರೀಶ್ ಒಟ್ಟಿಗೆ ಬದುಕುತ್ತಾರೆ ಎನ್ನುವ ನಂಬಿಕೆ ಒಂದು ಕ್ಷಣಕ್ಕೂ ಇರಲಿಲ್ಲ.

ನಿಜಕ್ಕೂ ಗಿರೀಶ್‌ಗೆ ಅವರಿಬ್ಬರ ಸ್ನೇಹದ ಬಗ್ಗೆ ತಕರಾರಿತ್ತಾ? ಗೊತ್ತಿಲ್ಲ. ಆದರೆ ಅದೊಂದು ದಿನ ಅವರಿಬ್ಬರು ರಸ್ತೆ ಬದಿ ಗಾಡಿಯ ಬಳಿ ನಿಂತುಕೊಂಡು ಪಾನಿಪುರಿ ತಿನ್ನುತ್ತಿರಬೇಕಾದರೆ ತನ್ನ ಹೊಸ ಕಾರಿನಲ್ಲಿ ಬಂದ ಅವನು ಎಲ್ಲರೆದುರು ಅವಳಿಗೆ ಬಯ್ದು ಅವಮಾನ ಮಾಡಿದ್ದ. ಎಷ್ಟು ಮಾತ್ರಕ್ಕೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗುವುದನ್ನು ಒಪ್ಪಿಕೊಳ್ಳದ ಅವಳು ಆವತ್ತು ಮಾತ್ರ ಅವನು ಅವಮಾನಿಸುತ್ತಿದ್ದರೆ ಸುಮ್ಮನೆ ನಿಂತು ಕೇಳಿಸಿಕೊಳ್ಳುತ್ತಿದ್ದಳು. ಎಲ್ಲ ಮುಗಿದ ಮೇಲೆ ಅರ್ಧ ತಿಂದ ಪಾನಿಪುರಿಯನ್ನು ಸುಮನ್‌ನ ತಟ್ಟೆಗೆ ಸುರಿದು ಕುರಿಯಂತೆ ಅವನನ್ನು ಹಿಂಬಾಲಿಸಿ ಕಾರು ಹತ್ತಿ ಕುಳಿತು ಗ್ಲಾಸ್ ಏರಿಸಿದಳು. ಅವನ ಮನಸ್ಸಲ್ಲಿ ಗೆಲುವಿನ ನಗೆಯಿತ್ತಾ? ಗೊತ್ತಿಲ್ಲ, ಇತ್ತ ಸುಮನ್ ಮಾತ್ರ ನಿಗಿ ನಿಗಿ ಉರಿವ ಕೆಂಡವಾಗಿದ್ದ.

ಅವತ್ತೇ ರಾತ್ರಿ ಮೆಸೇಜ್ ಮಾಡಿದ್ದ “ನಾಳೆ ಸಂಜೆ ಸಿಗು”
“ಹುಂ”
“ಯಾವ ಕಾರಣಗಳನ್ನೂ ಕೊಡಬೇಡ, ಅದೇ ಹೊಳೆ ಬದಿ ಬರುತ್ತೇನೆ, ನೀನು ಸಿಗಲೇಬೇಕು”
“ಹುಂ ಸಿಗುತ್ತೇನೆ” ಎಂದು ಫೋನ್ ಆಫ್ ಮಾಡಿಬಿಟ್ಟಿದ್ದಳು.

ಮರುದಿನ ಸಂಜೆ ಕಾಲೇಜು ಬಿಟ್ಟ ಕೂಡಲೇ ಅವನು ಹೊಳೆ ಬದಿ ಹೋಗಿ ಅವಳನ್ನು ಕಾಯುತ್ತಾ ಕುಳಿತಿದ್ದ. ಅವಳಿಗೆ ಅದ್ಯಾವ ಕಮಿಟ್ಮೆಂಟ್ ಇತ್ತೋ, ಹೇಳಿದ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿಯೇ ಹೋದಳು. ಹಾಗೆ ಹೋದವಳೇ ಪ್ಯಾಂಟ್ ಮಡಚಿ ಹೊಳೆಗೆ ಕಾಲು ಇಳಿಬಿಟ್ಟು ಕೂತಳು.

“ಅವನು ನಿನ್ನ ಬಾಳಿಸಲಾರನು ಹುಡುಗೀ, ಬೇಡ ಬಿಟ್ಟು ಬಿಡು” ಗೆಳೆಯನದು ಅಪ್ಪಟ ಕಳಕಳಿಯ ಸಲಹೆ. “ನೀನೆಂದಾರೂ ಮೀನಿಂದ ಕಚ್ಚಿಸಿಕೊಂಡಿದ್ದೀಯಾ?”.
” ಬಿಟ್ಟು ಬಿಡುತ್ತೀಯಾ ಈ ಹುಂಬತನ? ನಮ್ಮ ಗೆಳೆತನದ ಮೇಲಾಣೆ”.
“ಬಾ ಇಲ್ಲಿ ಕುಳಿತುಕೋ. ಸುಮ್ಮನೆ ಈ ಹೊಳೆಯಲಿ ಕಾಲು ಇಳಿಬಿಟ್ಟು ಮೀನಿಂದ ಕಚ್ಚಿಸಿಕೊಳ್ಳುವ ವಿಚಿತ್ರ ಸುಖ ಅನುಭವಿಸು”.
” ನನ್ನ ಪ್ರಶ್ನೆಗೆ ಇದು ಉತ್ತರವಲ್ಲ. ಹೇಳು ಬಿಟ್ಟು ಬಿಡುತ್ತೀಯಾ?”
“ಅವನನ್ನು ಪ್ರೀತಿಸಿದಂತೆ ಅವನ ದ್ವೇಷವನ್ನೂ ಪ್ರೀತಿಸುತ್ತೇನೆ. ಅವನ ಸಣ್ಣತನವನ್ನೂ ಪ್ರೀತಿಸುತ್ತೇನೆ. ಅವನು ನನ್ನವನಾಗಬೇಕೆಂದಿಲ್ಲ, ನಾನು ಅವನವಳಾಗಿದ್ದೆ ಅನ್ನುವ ಖುಶಿ ಸಾಕು ನನಗೆ. ಒಂದಿಡೀ ಬದುಕನ್ನು ಆ ಖುಶಿಯಲ್ಲೇ ಕಳೆದುಬಿಡುತ್ತೇನೆ” ಹಾಗಂದವಳ ಕಣ್ಣಿನ ಪೂರ್ತಿ ಅವನ ಮೋಹದ ಹೊಳಪು.
“ಹಾಗಾದರೆ ಅವನದು ಸಣ್ಣತನ ಎಂಬುವುದನ್ನು ಒಪ್ಪುತ್ತೀಯಾ?” ಸಣ್ಣ ಹೊಳಹು ಅವನ ಕಣ್ಣಲಿ
“ಅವನು ದೇವರಲ್ಲ ಮನುಷ್ಯ.‌ ನನ್ನೊಳಗಿರುವಂತೆ, ನಿನ್ನೊಳಗಿರುವಂತೆ, ಎಲ್ಲರೊಳಗಿರುವಂತೆ ಅವನಲ್ಲೂ ಸಣ್ಣತನವಿದೆ”. ಹೊಳೆಯ ಆ ಮೀನಿನೊಳಗೆ ಯಾವ ರಕ್ಕಸ ಶಕ್ತಿ ಹೊಕ್ಕಿತ್ತೋ ಗೊತ್ತಿಲ್ಲ, ಅವಳ ಕಾಲ ಹೆಬ್ಬೆರಳು ಕಚ್ಚಿತು. ಕಿತ್ತು ಹೋದ ಉಗುರು ಹೊಳೆಯ ನೀರನು ಕೆಂಪಾಗಿಸಿತು.‌ ಸಣ್ಣಗೆ “ಹಾ” ಎಂದು ಚೀರಿದಳು. ಹೊರಟು ನಿಂತವನು ಒಂದೇ ನೆಗೆತಕ್ಕೆ ಅವಳ ಬಳಿ ತಲುಪಿದ್ದ. “ಯಾಕೆ ಈ ಹಠ?” ಅವನದು ನೇರ ಪ್ರಶ್ನೆ. “ಯಾಕೆಂದರೆ ನಾನವನನ್ನು ಪ್ರೀತಿಸುತ್ತೇನೆ”.

” ಪ್ರೀತಿಯೆಂದರೆ ಹಠಮಾರಿತನಾನಾ? ತನ್ನ ಜೀವನವನ್ನೇ ಕೊಂದುಕೊಳ್ಳುವುದಾ?”
ಉತ್ತರ ಹೇಳಲು ಅವಳಲ್ಲಿರಲಿಲ್ಲ. ಚಪ್ಪಲಿ ಕಳಚಿ ಕೈಯಲ್ಲಿ ಹಿಡಿದು ಬರಿಗಾಲಲ್ಲಿ ಹೊಳೆ ದಂಡೆಯ ಮೇಲೆ ಅವನಿಗಿಂತ ಹತ್ತು ಹೆಜ್ಜೆ‌ ದೂರ‌ ನಡೆದಾಗಿತ್ತು.‌ ಅಲ್ಲಿಂದಲೇ ಕೂಗಿದಳು ” ಪ್ರೀತಿಯೆಂದರೆ ಅವನು, ಅವನು ಮಾತ್ರ”.‌ ಸುಮನ್‌ನ ಕಣ್ಣಲಿ ಸಣ್ಣಗೆ ನೀರು ಮಡುಗಟ್ಟುತ್ತಿತ್ತು. ‘ಅಪಾತ್ರ ದಾನ ಮಾಡುತ್ತಿದ್ದಿಯಾ ನೀನು’ ಅಂತ ಅಂದುಕೊಳ್ಳುತ್ತಲೇ ಅವಳು ಕುಳಿತಿದ್ದ ಅದೇ‌ ಕಲ್ಲಿನ‌ ಮೇಲೆ ಕುಳಿತ. ಅವಳಾಗಲೇ ಹೊಳೆಯನು ದಾಟಿ ಮತ್ತೊಂದು ತೀರ ಸೇರಿದ್ದಳು, ಅಲ್ಲಿ ಗಿರೀಶ್ ಅವಳಿಗೋಸ್ಕರಾನೇ ಕಾಯುತ್ತಾ ನಿಂತಿದ್ದ.

ಹಾಗೆ ಅವಳು ಹೊಳೆ ದಾಟಿ ಹೋದ ಮೇಲೆ ತುಂಬ ಹೊತ್ತು ಅವನು ಅದೇ ಕಲ್ಲಿನ‌ ಮೇಲೆ ಕುಳಿತಿದ್ದ. ಏನನಿಸಿತೋ ಏನೋ ಕಿಸೆಯಲ್ಲಿದ್ದ ಮೊಬೈಲ್ ಬಿಚ್ಚಿ ಅದೊರಳಗಿನ ಸಿಮ್ ತೆಗೆದು ಹೊಳೆಗೆಸೆದ. ನೀರಿನೊಂದಿಗೆ ತೇಲುತ್ತಾ, ಗಿಡಗಂಟಿ ಸಿಕ್ಕಾಗ ಮುಳುಗಿ ಮತ್ತೆ ನೀರ ಮೇಲೆ ತೇಲಿ ತನ್ನ ಕಣ್ಣಿಂದ ಮರೆಯಾಗುವಷ್ಟು ಹೊತ್ತೂ ಅದನ್ನು ನೋಡಿ, ಮರೆಯಾದ ಮೇಲೆ ತನ್ನ ದೃಷ್ಟಿಯ ಮಿತಿಯೇ ಇಷ್ಟೇ ಏನೋ ಅಂದುಕೊಂಡು ಮನೆ ಕಡೆ ಹೋದ.

ಇತ್ತ ಗಿರೀಶ್‌ನನ್ನು ಬೀಳ್ಕೊಟ್ಟು ಮನೆ ತಲುಪಿದ ಅವಳು ಗೆಳೆಯನ ನಂಬರ್ ಡಯಲ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು. ನಾಳೆ ಎಷ್ಟಾದರೂ ಕಾಲೇಜಲ್ಲಿ ಸಿಗುತ್ತಾನಲ್ಲ ಅಂದುಕೊಂಡು ಎಲ್ಲ ಮರೆತು ನಿದ್ರೆ ಹೋದಳು. ರಾತ್ರಿ ಪೂರ್ತಿ ಅರ್ಧ ಕಚ್ಚಿಟ್ಟ ಕನಸೊಂದು ಸುಮ್ಮನೆ ಕಾಡಿದಂತಾಗುತ್ತಿತ್ತು.

ಮರುದಿನ ಕಾಲೇಜ್ ಹೋದ್ರೆ ಸುಮನ್ ಬಂದಿರಲಿಲ್ಲ, ಅಷ್ಟೊಂದು ಗೆಳೆಯರೂ ಇಲ್ಲದ ಅವನ ಬಗ್ಗೆ ಯಾರಿಗೂ ಗೊತ್ತಿಲ್ಲ. ಲೈಬ್ರೆರಿ, ಅವರಿಬ್ಬರು ಮಾತಾಡಿಕೊಳ್ಳುತ್ತಿದ್ದ ಕಲ್ಲು ಬೆಂಚು, ಹೊಳೆ ಬದಿ ಎಲ್ಲ ಕಡೆ ಹುಡುಕಿದರೂ ಅವನು ಸಿಗಲೇ ಇಲ್ಲ. ಇಂದು ಬರುತ್ತಾನೆ, ನಾಳೆ ಬರುತ್ತಾನೆ, ಕೊನೆ ಪಕ್ಷ ಫೋನಾದರೂ ಮಾಡುತ್ತಾನೆ ಅಂತ ಕಾದದ್ದೇ ಬಂತು, ಅವನು ಬರಲೇ ಇಲ್ಲ.

ಗಿರೀಶ್ ಏನಾದರೂ ಅವನ ಮನಸ್ಸು ನೋಯುವಂತೆ ಮಾತನಾಡಿದ್ದನಾ? ಅದೇ ಕಾರಣಕ್ಕೆ ಅವನು ಯಾವ ಸುಳಿವನ್ನೂ ಬಿಡದೆ ನನ್ನ ಬದುಕಿನಿಂದ ಎದ್ದು ಹೋದನಾ? ಸಂಶಯಗಳೆಲ್ಲಾ ಅವಳನ್ನು ಆಗಾಗ ಕಾಡುತ್ತಿದ್ದರೂ ಕೇಳಲಾಗದೆ ಸುಮ್ಮನಾಗಿದ್ದಳು. ಯಾವ ಮುಜುಗರವೂ ಇಲ್ಲದೆ ಸುಮನ್ ಬಳಿ ಎಲ್ಲವನ್ನೂ ಕೇಳಬಹುದಿತ್ತು, ತುಂಬಾ ಸಲೀಸಾಗಿ ಜಗಳವಾಡುತ್ತಲೂ ಇದ್ದೆ. ಆದರೆ ಈಗ ಏನಾಗಿದೆ ನನಗೆ? ಗಿರೀಶ್ ಜೊತೆ ಒಂದು ಮಾತು ಆಡುವಾಗಲೂ, ಒಂದು ಪ್ರಶ್ನೆ ಕೇಳುವಾಗಲೂ ನೂರು ಸಲ ಯೋಚಿಸುತ್ತೇನೆ. ನನ್ನ ಮಾತು, ಪ್ರಶ್ನೆಯಿಂದ ಇವನಿಗೇನಾದರೂ ನೋವಾದರೆ ಎಂದು ಚಿಂತಿಸುತ್ತೇನೆ. ಅಂದರೆ ಅಷ್ಟು ಜೊಳ್ಳೇ ನಮ್ಮ ಸಂಬಂಧ? ಎಂದು ಆಗಾಗ ಆತ್ಮಾವಲೋಕನವೂ ಮಾಡಿಕೊಳ್ಳುತ್ತಿದ್ದಳು.

ಆದರೆ ಎಷ್ಟು ಅವಲೋಕನ ಮಾಡಿಕೊಂಡರೂ ಅವನನ್ನು ತೊರೆದು ಬದುಕಲಾರೆ ಎಂಬುದೇ ಅವಳ ಕೊನೆಯ ನಿರ್ಧಾರವಾಗಿರುತ್ತಿತ್ತು, ಅವನು ಮನೆಯವರ ಮುಂದೆ ಮದುವೆಯ ಪ್ರಸ್ತಾಪ ಇಡುವುದನ್ನು ಅವನು ತಳ್ಳಿ ಹಾಕುವವರೆಗೂ. ಅಷ್ಟು ಪ್ರೀತಿಸುತ್ತಿದ್ದವನು ಮದುವೆ ಅಂತ ಬಂದಾಗ ಯಾಕೆ ಹಿಂಜರಿದನೋ ಇವತ್ತಿಗೂ ಅರ್ಥವಾಗಿಲ್ಲ ಅವಳಿಗೆ. ಇಳಿ ಸಂಜೆಯ ಭೇಟಿ, ನವಿರು ಸ್ಪರ್ಶ, ಪುಟ್ಟ ಪುಟ್ಟ ಆಲಿಂಗನ, ಚುಂಬನ… ಅದರಾಚೆ ಅವನೇನಾದರೂ ಬಯಸಿದ್ದನಾ? ಈಗಲೂ ಗೊತ್ತಿಲ್ಲ ಅವಳಿಗೆ. ಅವನು ಬಯಸಿದ್ದರೆ ಇವಳು ಎಲ್ಲಾ ಮೊಗೆಮೊಗೆದು ಕೊಡುತ್ತಿದ್ದಳಾ? ಇಲ್ಲ. ಹಾಗಿದ್ದರೆ ಅವನು ನಂಬಿಕೆಗೆ ಅರ್ಹನಾಗಿರಲಿಲ್ಲವೇ? ಅಥವಾ ಒಂದು ಅಪನಂಬಿಕೆಯ ಬೇರನ್ನು ಉಳಿಸಿಕೊಂಡೇ ಅವನನ್ನು ಪ್ರೀತಿಸಿದ್ದಳಾ? ಅಷ್ಟು ಸ್ವಾರ್ಥಿಯಾ ನಾನು? ಸಾವಿರ ಪ್ರಶ್ನೆಗಳಿದ್ದವು ಅವಳಲ್ಲಿ.

ಆದರೆ ಉತ್ತರಿಸಲು ಅವಳ ಜೀವದ ಗೆಳೆಯ ಇರಲೇ ಇಲ್ಲ. ಅದೆಷ್ಟು ಹಂಬಲಿಸಿದ್ದಳು ಅವನಿಗಾಗಿ, ಅವನ ಪುಟ್ಟ ಸಾಂತ್ವನಕ್ಕಾಗಿ. ಈಗ ಎಲ್ಲ ಮುಗಿದ ಮೇಲೆ, ಓದು ಮುಗಿಸಿ ಒಂದು ಕೆಲಸ ಅಂತ ಗಿಟ್ಟಿಸಿಕೊಂಡ ಮೇಲೆ, ಬದುಕು ಹಳಿಗೆ ಬರುತ್ತಿದೆ ಅಂತ ಅನ್ನಿಸಿಕೊಂಡ ಮೇಲೆ ಮತ್ತೆ ಬರುತ್ತಿದ್ದಾನೆ ಬದುಕಿನೊಳಕ್ಕೆ. ಈಗ ಬದುಕಿನಲ್ಲಿ ಯಾವ ಕೋಲಾಹಲವೇಳಲಿದೆಯೋ ಯಾರಿಗೆ ಗೊತ್ತು? ಅಂದುಕೊಂಡು ಮತ್ತೆ ಕಪ್ ತುಟಿಗಿಟ್ಟುಕೊಂಡಳು. ಕಾಫಿ ತಣ್ಣಗಾಗಿತ್ತು. “ಮಾತಾಡಬೇಕು, ಸಂಡೆ ಸಿಗುತ್ತೀಯಾ?” ಮತ್ತೆ ಅವನ ಮೆಸೇಜ್. ಇಲ್ಲ ಎಂದು ಹೇಳಲಾರದೆ ಅವಳು ಹೂಂಗುಟ್ಟಿದಳು.

ಮಾತು ಕೊಟ್ಟಂತೆ ಭಾನುವಾರ ಹೊರಟು ನಿಂತು ಒಮ್ಮೆ ಕನ್ನಡಿ ನೋಡಿಕೊಂಡಳು. ‘ಸುಮನ್‌ಗೆ ನನ್ನ ಗುರುತು ಸಿಕ್ಕೀತಾ?’ ಪ್ರಶ್ನಿಸಿಕೊಂಡಳು. ‘ಗುರುತು ಸಿಗದೇ ಏನು? ಒಂದು ಸುತ್ತು ದಪ್ಪಗಾಗಿದ್ದೇನೆ, ತುಟಿಗೆ ಲಿಪ್ಸ್‌ಟಿಕ್ ಹಚ್ಚಲು ಕಲಿತುಕೊಂಡಿದ್ದೇನೆ ಅಷ್ಟೇ’. ಎಂದು ತಾನೇ ಉತ್ತರಿಸಿದಳು. ಈ ಐದು ವರ್ಷಗಳಲ್ಲಿ ಪ್ರಶ್ನೆಯೂ ನಾನೇ ಉತ್ತರವೂ ನಾನೇ ಆಗಿದ್ದೆ, ಈಗೇಕೆ ಈ ಯೋಚನೆ ಅಂತ ಅಂದುಕೊಂಡು ನಕ್ಕಳು.

ಅವನು ಮೊದಲೇ ಹೇಳಿದ್ದ ಪಾರ್ಕ್ ಗೆ ಹೋಗಿ ನೋಡಿದರೆ ಆಗಲೇ ಅವನು ಇವಳ ನಿರೀಕ್ಷೆಯಲ್ಲಿದ್ದ. ಕೈಯಲ್ಲಿದ್ದ ಪುಸ್ತಕವನ್ನು ಹಿಂದಿನಂತೆಯೇ ಅವಳ ಬ್ಯಾಗ್ ಗೆ ತುರುಕಿ ಅವಳನ್ನು ಎಳೆದುಕೊಂಡು ಪಾರ್ಕಿನ ಮತ್ತೊಂದು ಮೂಲೆಗೆ ಹೋದ. ಹಾಗೆ ಹೋಗುತ್ತಿರುವಾಗ “ಇಷ್ಟು ವರ್ಷ ಎಲ್ಲಿದ್ದಿ? ಏನು ಮಾಡುತ್ತಿದ್ದಿ” ಅಂತೆಲ್ಲಾ ನೀನು ಪ್ರಶ್ನಿಸುತ್ತಿ ಅಂತ ನನಗೆ ಗೊತ್ತು. ಅದೆಲ್ಲಾ ಆಮೇಲೆ ಹೇಳುತ್ತೇನೆ ಈಗ ನನ್ನ ಜೊತೆ ಬಾ” ಎಂದ. ಒಂದು ಕ್ಷಣ ನಿಂತ ಅವಳು “ಊಹೂಂ ಸುಮನ್, ನಾನು ಅದ್ಯಾವುದನ್ನೂ ಕೇಳುವುದೇ ಇಲ್ಲ. ನೀನು ಮತ್ತೆ ಬಂದಿಯಲ್ಲ ಸಾಕು ನನಗೆ” ಅಂದಳು. ಒಂದು ಕ್ಷಣ ನಿಂತು ಅವಳನ್ನು ಬಾಚಿ ತಬ್ಬಿಕೊಂಡ ಅವನು ಅವಳ ಕಣ್ಣುಮುಚ್ಚಿಸಿ ನಾಲ್ಕು ಹೆಜ್ಜೆ ಮುಂದೆ ಹೋಗಿ ಕಣ್ಣು ಮುಚ್ಚಿದ್ದ ಕೈ ತೆಗೆದ.

ಕಣ್ಣು ಉಜ್ಜಿ ನೋಡಿದರೆ ಮುಂದೆ ಗಿರೀಶ್ ತಲೆ ತಗ್ಗಿಸಿ ನಿಂತಿದ್ದ. ತಿರುಗಿ ಹೋಗುತ್ತೇನೆಂದು ಹೊರಟ ಅವಳನ್ನು ತಡೆದ ಸುಮನ್ “ಮೊನ್ನೆ ನನ್ನ ಹುಡುಕಿಕೊಂಡು ಬಂದ ಇವನು ನಿನ್ನ ಕೇಳಿದ, ನೀನಿಲ್ಲದೆ ಬರಡಾದ ಬದುಕಿನ ಬಗ್ಗೆ ಹೇಳಿಕೊಂಡ. ಮೊದಲು ಅವಳ ಪಡೆದುಕೊಳ್ಳುವ ಯೋಗ್ಯತೆ ಇಲ್ಲದ ಅಯೋಗ್ಯ ನೀನು ಅಂತ ನಾನೂ ಬಯ್ದೆ. ಅವನ‌ ಪಶ್ಚಾತ್ತಾಪ ಪ್ರಾಮಾಣಿಕವಾದುದು ಅನ್ನಿಸಿದ ಮೇಲೆ ನಿನ್ನ ಸಂಪರ್ಕಿಸಿದೆ, ಈಗ ನಿನ್ನ ಮುಂದೆ ನಿಲ್ಲಿಸಿದ್ದೇನೆ. ಕೇಳಬೇಕಿರುವುದನ್ನು ಕೇಳು, ಹೇಳಲಿರುವುದನ್ನೂ ಹೇಳು” ಎಂದು ಮೌನವಾದ.
“ಹೇಳಲೂ ಕೇಳಲೂ ಏನೂ ಉಳಿದಿಲ್ಲ. ನಾನು ಹೋಗಬೇಕು” ಎಂದು ಹೊರಡಲುನುವಾದಳು.
ಅಷ್ಟೂ ಹೊತ್ತು ಸುಮ್ಮನಿದ್ದ ಗಿರೀಶ್ ಆರ್ದ್ರವಾಗಿ “ನನ್ನ ಕ್ಷಮಿಸಲಾರೆಯಾ? ಒಂದು ಬಾರಿ ಅವಕಾಶ ಕೊಡಲಾರೆಯಾ?” ಎಂದು ಕೇಳಿದ. ಆ ಆರ್ದ್ರತೆ ಮಾಯುವ ಮುನ್ನವೇ ಅವಳ ಕೈಯನು ಗಿರೀಶ್ ಕೈಯೊಳಗೆ ಇರಿಸಿದ ಸುಮನ್ “ಹುಡುಗಿ ಇವ ನಿನ್ನ ಚಂದ ಬಾಳಿಸುತ್ತಾನೆ. ಬಹುಶಃ ನನಗಿಂತಲೂ ಚಂದ” ಎಂದು ಅವಳ ಕೆನ್ನೆ ತಟ್ಟಿ ಬೆನ್ನು ತಿರುಗಿಸಿ ಅನೂಹ್ಯದತ್ತ ಹೆಜ್ಜೆ ಹಾಕಿದ. ಅವನ ಕಣ್ಣಲ್ಲಿ ನೀರು ತುಂಬಿಕೊಂಡಿತ್ತಾ? ಊಹೂಂ, ಅವಳಿಗೆ ಗೊತ್ತಾಗಲಿಲ್ಲ. “ನೀ ನನ್ನ ಅಂದು ಪ್ರೀತಿಸುತ್ತಿದ್ದೆಯಾ? ಅದಕ್ಕೇ ತೊರೆದು ಹೋದೆಯಾ?” ಕೇಳಬೇಕು ಅಂದುಕೊಳ್ಳುವಷ್ಟರಲ್ಲಿ ಅವನು ಅವಳ ದೃಷ್ಟಿಯಿಂದ ದೂರ ಸರಿದಿದ್ದ.