ಮುದ್ದು ಮುನಿಯಾಗಳ ಮೋಹಕ ಲೋಕ

0
37

ರೇಣು ಪ್ರಿಯದರ್ಶಿನಿ.ಎಂ
renu.priyadarshini.m@gmail.com

ಹನಿವ ಮಳೆಯಲ್ಲೂ ಹೊರಗೆ ಹೊಳೆಯುವ ಆಕಾಶ. ಕಿಟಕಿಯ ಬಳಿ ನಿಂತವಳಿಗೆ ಬೀಸುಗಾಳಿಗೆ ಹೊಯ್ದಾಡುತ್ತ ತೇಲುವ ಪಟ್ಟಿಯೊಂದು ಕಣ್ಸೆಳೆಯಿತು. ಕಣ್ಣು ಕೀಲಿಸಿ ನೋಡಿದರೆ ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಹಸಿರು ಹುಲ್ಲಿನ ಉದ್ದ ಎಸಳನ್ನು ಕಚ್ಚಿಕೊಂಡು ಹಾರುತ್ತ ಬಂದು ಗಿಡದ ಮೇಲೆ ವಿರಮಿಸಿದ್ದುಕಂಡಿತು ಕಣ್ಣು ಮಿಟುಕಿಸುವುದರೊಳಗೆ ಗಿಡದ ಪೊದೆಯೊಳಗೆ ನುಗ್ಗಿ, ಹುಲ್ಲ ಎಸಳನ್ನು ಎಳೆದುಕೊಂಡು ಹೋದಾಗಲೇ ಅರಿವಾಯಿತು. ಇದು ಹಕ್ಕಿಯ ಗೂಡುಕಟ್ಟುವ ಸಂಭ್ರಮ ಎಂದು.

ಗುಬ್ಬಚ್ಚಿಯನ್ನು ಹೋಲುವ ಈ ಪುಟ್ಟ ಹಕ್ಕಿಯನ್ನು ಮುನಿಯ ಅಥವಾ ರಾಟವಾಳ ಇಲ್ಲವೇ ಅಬ್ಬಲಕ್ಕಿ ಎಂದು ಕರೆಯುತ್ತಾರೆ. ಮಳೆಗಾಲವು, ಇವುಗಳ ಸಂತಾನ ಋತುವಿನ ಸಮಯ. ಗುಬ್ಬಚ್ಚಿ ಕುಟುಂಬಕ್ಕೆ ಸೇರಿದ ಈ ಹಕ್ಕಿಗೆ ತಲೆ, ಬೆನ್ನು ಹಾಗೂ ರೆಕ್ಕೆಗಳು ಕಂದು ಬಣ್ಣಕ್ಕಿದ್ದು ಎದೆ ಮತ್ತು ಹೊಟ್ಟೆಯ ಭಾಗ ಬಿಳಿಯದ್ದಾಗಿದೆ. ಈ ಬಿಳಿಯ ಹೊಟ್ಟೆಯ ಮೇಲೆ ಅರ್ಧ ಚಂದ್ರಾಕಾರದ ಉಂಗುರದ ಗುರುತು ಇರುವುದರಿಂದ ಇದನ್ನು ಚುಕ್ಕೆ ಮುನಿಯ ಅಥವಾ ಚುಕ್ಕೆ ರಾಟವಾಳ ಎಂದು ಕರೆಯುತ್ತಾರೆ. ಇದರ ಹೊಟ್ಟೆಯ ಮೇಲಿನ ಗುರುತು ಮೀನಿನ ಹುರುಪೆಯನ್ನು ಹೋಲುವುದರಿಂದ ಇದನ್ನು ಇಂಗ್ಲೀಷ್‌ನಲ್ಲಿ scaly breasted muniaಅಥವಾ spotted muniaಎಂದು ಕರೆಯುತ್ತಾರೆ. ಹಾಗೆಯೇ Lonchura panctulata ಎಂಬ ವೈಜ್ಞಾನಿಕ ನಾಮವನ್ನು ಹೊಂದಿರುವುದು.

ಚುಕ್ಕೆ ಮುನಿಯ ಹಕ್ಕಿಯು ಏಷಿಯಾ ಖಂಡದ ಸ್ಥಳೀಯ ಹಕ್ಕಿಯಾಗಿದ್ದು ಭಾರತ, ಶ್ರೀಲಂಕಾ, ಇಂಡೋನೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ವ್ಯಾಪಕವಾಗಿ ಕಂಡು ಬಂದಿದೆ. ಆದರೆ ಭಾರತದ ಪಶ್ಚಿಮ ರಾಜ್ಯಗಳಲ್ಲಿ ಹಾಗೂ ಪಾಕಿಸ್ತಾನದಲ್ಲಿ ಇದು ಕಾಣಿಸುವುದಿಲ್ಲ. ಇದರ ಉಪಸ್ಥಿತಿಯನ್ನು ಕರ್ನಾಟಕಾದ್ಯಂತ ನೋಡಬಹುದಾದರೆ, ಮೈಸೂರಿನ ಸುತ್ತ ಮುತ್ತ ಇರುವ ಹುಲ್ಲುಗಾವಲು, ಪೊದೆ ಕಾಡು, ಗದ್ದೆ ಬಯಲುಗಳಲ್ಲಿ ಹಾಗೂ ಕೆರೆ, ಕಾಲುವೆ, ನದಿಯ ಅಂಚಿನಲ್ಲಿರುವ ಜೊಂಡಿನ ಬಳಿ ಮನೆ ಮಾಡಿಕೊಂಡಿವೆ. ಚುಕ್ಕೆ ಮುನಿಯ ಹಕ್ಕಿಗೆ ಧಾನ್ಯಗಳು, ಹುಲ್ಲಿನ ಬೀಜಗಳನ್ನು ಮುಖ್ಯ ಆಹಾರವಾಗಿಸಿ- ಕೊಂಡಿರುವುದರಿಂದ ಇದನ್ನು ಕಾಳು-ಬೀಜ ತಿನ್ನುವ ಹಕ್ಕಿಗಳ ಗುಂಪಿಗೆ ಸೇರಿಸಲಾಗಿದೆ. ಈ ಹಕ್ಕಿಗೆ ದಪ್ಪನಾದ, ಚೂಪಾದ, ನೀಲಿ-ಬೂದು ಬಣ್ಣದ ತ್ರಿಕೋನಾಕಾರದ ಚಿಕ್ಕ ಕೊಕ್ಕು ಇದ್ದು ಧಾನ್ಯವನ್ನು ಪುಡಿ ಮಾಡಿ ಸೇವಿಸಲು ಅನುಕೂಲವಾಗಿರುವುದು. ಇದು ಕೆಲವೊಮ್ಮೆ ಹಣ್ಣುಗಳನ್ನು ಮತ್ತು ಹುಳು ಕೀಟಗಳನ್ನು ಸಹ ತಿನ್ನುತ್ತವೆ.

ಚುಕ್ಕೆ ಮುನಿಯ ಗಂಡು ಹಾಗೂ ಹೆಣ್ಣು ಹಕ್ಕಿಗಳು ಗಾತ್ರ, ಆಹಾರ ಬಣ್ಣದಲ್ಲಿ ಒಂದೇ ರೀತಿಯಾಗಿರುವುದು. ಇವುಗಳು ಸಾಧಾರಣವಾಗಿ ಚಿಕ್ಕ ಚಿಕ್ಕ ಗುಂಪುಗಳಾಗಿ ವಾಸಿಸುತ್ತಿದ್ದು, ಗಿಡಗಳ ಸಂದಿನಲ್ಲಿ ಅಥವಾ ಪೊದೆಗಳಲ್ಲಿ ಚೆಂಡಿನಾಕಾರದ ಗುಂಡನೆಯ ಗೂಡು ಕಟ್ಟುತ್ತದೆ. ಜೂನ್-ಸೆಪ್ಟೆಂಬರ್ ತಿಂಗಳು ಈ ಹಕ್ಕಿಯು ಸಂತಾನ ವೃದ್ಧಿಯ ಸಮಯ. ಹಸಿಯಾದ ಮತ್ತು ಒಣಗಿದ ಹುಲ್ಲು, ನಾರು, ಹತ್ತಿಗಳಿಂದ ಮಾಡಿದ ಅಸ್ತವ್ಯಸ್ತ ಗೂಡಿನಲ್ಲಿ ಹೆಣ್ಣು ಹಕ್ಕಿಯು ೪-೭ ಚಿಕ್ಕ, ಅಚ್ಚ ಬಿಳಿಯ ಮೊಟ್ಟೆಗಳಿಟ್ಟು, ಮರಿ ಮಾಡುವುದು. ಗೂಡು ಕಟ್ಟುವ ಕಾರ್ಯದಲ್ಲಿ ತಂದೆ ತಾಯಿ ಹಕ್ಕಿಗಳೆರಡೂ ಪಾಲ್ಗೊಂಡಿದ್ದು ಅತಿ ಜಾಗರೂಕತೆಯಿಂದ ಕಾಗೆ, ಕೆಂಭೂತ, ಹದ್ದುಗಳಂತಹ ಇತರ ಪರಭಕ್ಷಕ ಹಕ್ಕಿಗಳಿಗೆ ಸುಳಿವುಕೊಡದಂತೆ ಕಾರ್ಯನಿರ್ವಹಿಸುತ್ತವೆ. ಇವುಗಳು ಪೊದೆಗಳ ಒಳಗಿರುವ ಗೂಡಿನ ಬಳಿ ನುಸುಳುವ ದಾರಿಯನ್ನು ಮತ್ತೆ ಮತ್ತೆ ಬದಲಿಸಿ ನೋಡುಗರಿಗೆ ಗೊಂದಲ ಉಂಟು ಮಾಡುವುದು. ಚುಕ್ಕೆ ಮುನಿಯ ಹಕ್ಕಿಯ ಗೂಡಿನ ಪ್ರವೇಶದ್ವಾರ ಪಾರ್ಶ್ವದಲ್ಲಿದ್ದು, ಈ ವಿನ್ಯಾಸ ಕೇವಲ ಮುನಿಯ ಹಕ್ಕಿಗಳಲ್ಲಿಯೇ ಕಂಡುಬರುತ್ತದೆ.

ಮುನಿಯಗಳು ಸಂಘ ಜೀವಿಗಳು ಸಾಮಾನ್ಯವಾಗಿ ಗುಂಪಿನಲ್ಲಿ ವಿಹರಿಸುತ್ತ ಇತರ ಮುನಿಯ ಹಕ್ಕಿಗಳ ಜೊತೆ ಅಥವಾ ಗೀಜುಗನ ಹಕ್ಕಿಯ ಜೊತೆ ಒಂದಾಗಿ ಬಾಳುವುದನ್ನು ಗಮನಿಸಬಹುದು. ಸದಾ ತಮ್ಮ ಬಳಗದ ಹಕ್ಕಿಗಳ ಜೊತೆ ಮೆಲುವಾದ ದನಿಯಲ್ಲಿ ಟೀಂ….. ಟೀಂ….. ಎಂದು ತಂತಿ ಮೀಟಿದಂತೆ ಸದ್ದು ಮಾಡುತ್ತ ಪರಸ್ಪರ ಸಂಭಾಷಿಸುವುದು.

ಪಕ್ಷಿ ಪ್ರಪಂಚದಲ್ಲಿ ಕೆಲವು ಹಕ್ಕಿಗಳು ಹಗಲು ದೊಡ್ಡದಾದಾಗ ಸಂತಾನಾಭಿವೃದ್ಧಿ ನಡೆಸಿದರೆ, ಇನ್ನು ಕೆಲವು ಪಕ್ಷಿಗಳು ರಾತ್ರಿ ದೊಡ್ಡದಾದಾಗ ಮರಿ ಮಾಡುತ್ತವೆ. ಆದರೆ ಚುಕ್ಕೆ ಮುನಿಯ ಹಕ್ಕಿಯು ಪರಿಸರದಲ್ಲಿ ಆಹಾರ ದೊರಕುವ ಸಾಧ್ಯತೆ ಹೆಚ್ಚಾದಂತೆ ಹಾಗೂ ವಾತಾವರಣದಲ್ಲಿ ತೇವಾಂಶ ಹೆಚ್ಚಾದಂತೆ ವಂಶಾಭಿವೃದ್ಧಿ ಮಾಡುತ್ತವೆ ಎಂದು ಪಕ್ಷಿ ವಿಜ್ಞಾನಿಗಳು ಹೇಳುತ್ತಾರೆ. ಇವರ ಅನಿಸಿಕೆಯಂತೆ ಪರಿಸರದಲ್ಲಿ ಆಹಾರ ದೊರಕುವ ಸಾಧ್ಯತೆ ವೃದ್ಧಿಸಿದಂತೆ ಇವುಗಳ ಗೋನಾಡ್ ಅಥವಾ ಲೈಂಗಿಕ ಗ್ರಂಥಿಗಳು ಸಕ್ರಿಯವಾಗುವುವು. ನಂತರ ಈ ಗ್ರಂಥಿಗಳಿಂದ ಸ್ರವಿಸುವ ಹಾರ್ಮೋನುಗಳು ಸಂತಾನೋತ್ಪತ್ತಿ ಕ್ರಿಯೆಗೆ ನಾಂದಿ ಹಾಡುವುದಂತೆ.

ಮೈಸೂರಿನ ಸುತ್ತ ಮುತ್ತ ಇರುವ ಕೆರೆ, ಕಾಲುವೆ, ಗದ್ದೆ ಪ್ರದೇಶಗಳಲ್ಲಿ ಬಿಳಿ ಕತ್ತಿನ ಮುನಿಯ ಹಾಗೂ ಕಪ್ಪು ತಲೆಯ ಮುನಿಯ ಅಥವಾ ತ್ರಿವರ್ಣ ಮುನಿಯಗಳನ್ನು ನೋಡಬಹುದಾದರೆ ಚುಕ್ಕೆ ಮುನಿಯವು ನಗರೀಕರಣಕ್ಕೆ ಹೊಂದಿಕೊಂಡಿದೆ. ಹಾಗಾಗಿ ಇದನ್ನು ಜನವಸತಿ ಪ್ರದೇಶಗಳಲ್ಲಿ ಹಾಗೂ ಉದ್ಯಾನವನಗಳಲ್ಲಿ ನೋಡಬಹುದು. ಕೊಂಚ ದಿಟ್ಟ ಸ್ವಭಾವದ ಈ ಹಕ್ಕಿಯು ತನ್ನ ಸುತ್ತಮುತ್ತಲಿನ ಪರಿಸರ ಸುರಕ್ಷಿತವೆನಿಸಿದಾಗ ನಿರ್ಭಿಡೆಯಿಂದ ಹಾರಾಡುತ್ತ, ಮಾನವನ ಜೊತೆ ಸಹಬಾಳ್ವೆ ನಡೆಸುತ್ತ ನೆಮ್ಮದಿಯ ಜೀವನ ಸಾಗಿಸುವುದು.

ಚುಕ್ಕೆ ಮುನಿಯ ಹಕ್ಕಿಗಳು ಅಂದವಾಗಿಯೂ ಆಕರ್ಷಕವಾಗಿಯೂ ಪುಟ್ಟದಾಗಿಯೂ ಇರುವುದರಿಂದ ಇವುಗಳನ್ನು ಪಂಜರದಲ್ಲಿಟ್ಟು ಸಾಕುತ್ತಾರೆ. ಕಾಳು ತಿನ್ನುವ ಈ ಪುಟ್ಟ ಹಕ್ಕಿಗಳು ಗುಂಪಿನಲ್ಲಿ ವಾಸಿಸುವುದರಿಂದ ಇವುಗಳನ್ನು ಪಂಜರದಲ್ಲಿಟ್ಟು ನಿಭಾಯಿಸಲು ಸುಲಭವಾಗಿದೆ. ಆದುದರಿಂದ ಬೇಟೆಗಾರರಿಗೆ ಅಪ್ಯಾಯಮಾನವಾಗಿದ್ದು, ಇವುಗಳ ಕಳ್ಳಸಾಗಾಣಿಕೆ ವ್ಯಾಪಕವಾಗಿ ನಡೆಯುತ್ತಿದೆ.
ಭತ್ತದ ಪೈರು ಹಾಗಾಗಿ ಇತರ ಧಾನ್ಯಗಳ ಕಟಾವಿಗೆ ಬಂದಾಗ ನೂರಾರು ಮುನಿಯ ಹಕ್ಕಿಗಳು ಗದ್ದೆಗೆ ದಾಳಿಯಿಟ್ಟು ರೈತನಿಗೆ ಉಪದ್ರವ ಕೊಡುತ್ತದೆ. ಆದರೆ, ಗುಂಪಾಗಿ ಹಾರಾಡುತ್ತ ಅಲೆಯಂತೆ ತೇಲಿ ಬಂದು ರೊಯ್ಯನೆ ಜೊಂಡಿನ ನಡುವೆ ಮಾಯವಾಗಿ ಮುನಿಯಗಳು ಛಾಯಾಗ್ರಾಹಕರ ನೆಚ್ಚಿನ ಹಕ್ಕಿ. ಹಾಲು ತುಂಬಿದ ಕಾಳಿನ ತೆನೆಯಮೇಲೆ ಸರತಿಯಂತೆ ಕೂತು ವಿವಿಧ ಭಂಗಿಯಲ್ಲಿ ಕಾಳು ಸವಿಯುತ್ತ, ಗಿಡದಿಂದ ಗಿಡಕ್ಕೆ ತುಂಟಾಟವಾಡುತ್ತ ಮೋಜಿನಲ್ಲಿ ವಿಹರಿಸುವ ಮುನಿಯಗಳನ್ನು ನೋಡಿ ಆನಂದಿಸುವುದು, ಕ್ಯಾಮರಾದಲ್ಲಿ ಸೆರೆಹಿಡಿಯುವುದು ನನಗಂತೂ ರೋಮಾಂಚನಕಾರೀ ವಿಷಯ.