ವಾರದ ಅಂಕಣ

0
60

ಈ ಕೆಳಗಿನ ಲೇಖನವನ್ನು ಬರೆದದ್ದು ವಿಶ್ವವಿಖ್ಯಾತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್. ಮಾಂತ್ರಿಕ ವಾಸ್ತವಕ್ಕೆ ಹೆಸರಾದ ನೊಬೆಲ್ ಪ್ರಶಸ್ತಿ ಪುರಸ್ಕೃತನಾದ ಮಾರ್ಕೇಸ್ ಮೂಲತಃ ಪತ್ರಕರ್ತರಾಗಿದ್ದರು. ಇತ್ತೀಚೆಗೆ ಅವರು ಪತ್ರಕರ್ತನಾಗಿ ಬರೆದಿದ್ದ ವರದಿ, ಟಿಪ್ಪಣಿಗಳ ಸಂಗ್ರಹ ಪ್ರಕಟವಾಗಿದೆ. ಈ ಪುಸ್ತಕದಲ್ಲಿರುವ ಮಾರ್ಕೇಸ್ 1954ರಷ್ಟು ಹಿಂದೆಯೇ ಬರೆದಿದ್ದ ಲೇಖನದ ಅನುವಾದ ಈ ವಾರದ

ಗಮನಿಸಿ, ಇದನ್ನು ಬರೆದದ್ದು ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್, ೧೯೫೪ರಲ್ಲಿ.

ಎಂ.ಎಸ್.ಶ್ರೀರಾಮ್
mssriram@pm.me

ಒಂದು ಚದುರ ಮೈಲಿಯ ಸಾಂದ್ರತೆಯಲ್ಲಿ ಜನರಿಗಿಂತ ಹೆಚ್ಚು ರಕ್ತಪಾತವೇ ಕಾಣುವ ಭಾವಾತಿರೇಕದ ಕ್ರೌರ್ಯವನ್ನು ಬಿಂಬಿಸುವ ಕಾರ್ಯಕ್ರಮಗಳ ಪ್ರೇಕ್ಷಕರು ಅಥವಾ ಓದುಗರು ಮಾಧ್ಯಮಗಳ ಬಲಿಪಶುವಾಗುವ ಅಪಾಯದ ದುರಂತವನ್ನು ತಾವೇ ತಡೆಗಟ್ಟುವ ಕ್ರಮವನ್ನು ಕೈಗೊಳ್ಳಬೇಕಾದ ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸುವವರು ಇನ್ನೂ ಇದ್ದಾರೆ. ಆದರೆ ಒಮ್ಮೊಮ್ಮೆ ನಿಜಜೀವನದ ಕ್ರೌರ್ಯ ಅದನ್ನೂ ಮೀರಿದ್ದು.

ಯಾವುದೇ ಸಾಹಿತ್ಯಿಕ ವಿಮರ್ಶಕ ನೈಜತೆಯಿಲ್ಲದ ಅತಿರೇಕದ ಘೋರ ವಿವರಣೆಯೆಂದು ಟೀಕಿಸಿ ತಳ್ಳಿಹಾಕಬಹುದಾದಂತಹ ಘಟನೆ ಆಂಟಿಯೋಕ್ವದ ಸಾನ್ ರಫೆಲ್ ನಗರಪಾಲಿಕೆಯ ಸರಹದ್ದಿನಲ್ಲಿ ಘಟಿಸಿತು. ಮೇಲ್ಮೇಲೆ ಈ ಘಟನೆಗೆ ಕಂಡ ಕಾರಣ ಎರಡು ಸಂಸಾರಗಳ ನಡುವಿನ ಈರ್ಷ್ಯೆ ಎನ್ನುವುದನ್ನು ಸಮಕಾಲೀನ ಸಾಹಿತ್ಯಿಕ ಮಾನದಂಡಗಳು ಒಪ್ಪದೇ, ಅದನ್ನು ಎರಡು ಶತಮಾನಗಳ ಹಿಂದಿನ ಕ್ಲೀಷೆಯೆಂದು ತಳ್ಳಿಹಾಕುತ್ತದೆ. ಆದರೆ ಸಾನ್ ರಫೆಲ್ ನಲ್ಲಿ ಉದ್ಭವಿಸಿದ ರಕ್ತಸಿಕ್ತ ನಾಟಕದ ಮೂಲವಿದ್ದದ್ದು ಎರಡು ಸಂಸಾರಗಳ ನಡುವಿನ ಈರ್ಷ್ಯೆಯಲ್ಲಿ ಎನ್ನುವುದು ಸುಳ್ಳೆಂದು ಭಾವಿಸವವರಿಗೆ ಜೀವನದಲ್ಲಿನ ಸಾಂಪ್ರದಾಯಿಕತೆಯ ಅತಿರೇಕವನ್ನೂ ಏಕತಾನೆಯನ್ನೂ ಧಿಕ್ಕರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಊಹೆಯಂತೆ ಅಲ್ಲೊಂದು ಅಪರಾಧ ಘಟಿಸಿತ್ತು. ಇದು ಸಾಧಾರಣ ಅಪರಾಧವಾಗಿರದೇ, ಕೊಲೆಗಡುಕ ತನ್ನ ಬಲಿಪಶುವನ್ನು ಮೊದಲಿಗೆ ಗುಂಡು ಹಾರಿಸಿ ಕೊಂದ ನಾಟಕೀಯ ಹತ್ಯೆಯಾಗಿತ್ತು. ತದನಂತರ ಸಾಹಿತ್ಯವನ್ನು ವಿಸ್ಫೋಟಗೊಳಿಸುವಂತಹದ್ದಾಯಿತು – ಬಲಿಪಶುವಿನ ಮೇಲೆ ಗುಂಡು ಹಾರಿಸಿ ಕೊಂದ ಬಳಿಕ, ಶವದ ಮೇಲೆ ದೊಡ್ಡ ಮಚ್ಚಿನಿಂದ ಆಕ್ರಮಣ ಮಾಡಿದ, ನಂತರ ಬರ್ಬರತೆಯ ಅತಿರೇಕದೆಡೆಗೆ ಧಾವಿಸಿ, ಕೊಲಂಬಿಯಾದ ಕೆಲವರ ವಂಶಾವಳಿಯಲ್ಲಿನ ಟಾರ್ಟರ್ ಹಿನ್ನೆಲೆಯನ್ನು ಆವಾಹಿಸುತ್ತಾ, ಹೇಗೆ ಯಾವುದೇ ಸ್ಪಷ್ಟ ಕಾರಣೋದ್ದೇಶವಿಲ್ಲದೆ ಶವದ ನಾಲಿಗೆಯನ್ನು ಕತ್ತರಿಸಿದ, ಅದನ್ನು ನಿಜಕ್ಕೂ ಏನೂ ಮಾಡದೇ ಇದ್ದುಬಿಟ್ಟ.

ಈ ಸುದ್ದಿಗೆ ಪ್ರಾಂತೀಯ ವಾರ್ತೆಗಳ ಪುಟದಲ್ಲಿ ಎರಡು ಕಾಲಮ್ಮುಗಳ ಬೆಲೆಯೂ ಗಿಟ್ಟಲಿಲ್ಲ. ಯಾವುದೇ ಅಪರಾಧದಂತೆ ಇದೊಂದು ಬರ್ಬರಾಪರಾಧವಾಗಿತ್ತು. ಆದರೆ ಇಂದಿನ ದಿನಗಳ ಮಹತ್ವವೆಂದರೆ ಇದರಲ್ಲಿ ಯಾವುದೇ ಅತಿರೇಕವಿಲ್ಲ. ವಾರ್ತೆಯಾಗಿ ಇದು ಸಾಮಾನ್ಯವಾರ್ತೆ, ಸಾಹಿತ್ಯಕ್ಕೆ ಇದು ಅತಿರೇಕದ ಕ್ರೌರ್ಯ.
ನಿಜಜೀವದಲ್ಲಿ ಇನ್ನಷ್ಟು ವಿವೇಚನೆಯಿರಬೇಕೆಂದು ಸಲಹೆ ನೀಡುವುದೇ ಅತ್ಯುತ್ತಮ ಮಾರ್ಗ. ಉತ್ತರಪ್ರದೇಶದ ಬುಲಂದ್ಸಹರ್‌ನಲ್ಲಿ ಕೃಷಿಭೂಮಿಯಲ್ಲಿ ಗೋಮಾಂಸ ಸಿಕ್ಕಿತ್ತೆನ್ನುವ ಕಾರಣಕ್ಕೆ ಆಗಬಹುದಾಗಿದ್ದ ಹಿಂಸಾಚಾರವನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರೇ ಹತ್ಯೆಗೊಳಗಾದರು. ಅದರ ಚಿತ್ರಗಳು ಲಭ್ಯವಿದ್ದುವು. ಅದರಲ್ಲಿ ಆರೋಪಿಗಳು ಹಲವು ದಿನಗಳ ಕಾಲ ಫೇಸ್ ಬುಕ್ಕಿನಲ್ಲಿ ತಮ್ಮ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ ಬಂಧಿತರಾಗಲಿಲ್ಲ. ಬಂಧಿತರಾದ ಆರು ತಿಂಗಳಿಗೆ ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಅವರಿಗೆ ಜೈಲಿನಾಚೆ ಭರ್ಜರಿ ಸ್ವಾಗತ ಸಿಕ್ಕಿತು. ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎನ್ನುವ ಘೋಷಣೆಗಳು ಕೇಳಿದುವು. ಹಾರ ಹಾಕಿ ಅವರನ್ನು ಸ್ವಾಗತಿಸಿ, ಮಿಠಾಯಿ ಹಂಚಿ ಸೆಲ್ಫಿಗಳನ್ನು ತೆಗೆದುಕೊಳ್ಳಲಾಯಿತು. ಇದು ಶುಷ್ಕ ವಿಡಂಬನೆಯಲ್ಲ, ವಾರ್ತೆ. ರಾಜಾಸ್ಥಾನದಲ್ಲಿ ಗೋರಕ್ಷಕರು ಎರಡು ವರ್ಷಗಳ ಹಿಂದೆ ನಿರ್ಮಮಕಾರವಾಗಿ ಕೊಂದ ಪೆಹ್ಲು ಖಾನನ ಕಥೆಯೂ ಇತ್ತೀಚೆಗೆ ಸುದ್ದಿಯಲ್ಲಿತ್ತು. ಅವನನ್ನು ಕೊಂದ ಪ್ರಕ್ರಿಯೆಯ ವಿಡಿಯೋ ಇತ್ತು. ಅದರಲ್ಲಿದ್ದವರ ಮುಖಗಳು ಕಾಣುತ್ತಿದ್ದುವು. ಆದರೆ ತಾಂತ್ರಿಕವಾಗಿ ಆ ವಿಡಿಯೋದ ಪರಿಶೀಲನೆಯಾಗಿರಲಿಲ್ಲವಾದ್ದರಿಂದ ಎಲ್ಲರನ್ನೂ ನಿರಪರಾಧಿಗಳೆಂದು ಬಿಡುಗಡೆ ಮಾಡಲಾಯಿತು. ಅವರಿಗೂ ಜೈಲಿನಾಚೆ ಭರ್ಜರಿ ಸ್ವಾಗತವಿತ್ತು. ಇದು ದುರಂತವಲ್ಲ, ಸುದ್ದಿ.

ರಾಮಘಡದಲ್ಲಿ ಅಲೀಮುದ್ದೀನ್ ಅನ್ಸಾರಿಯನ್ನು ನಿರ್ಮಮಕಾರವಾಗಿ ಕೊಂದ ಎಂಟು ಶಿಕ್ಷಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದಾಗ ಅವರನ್ನು ಸಂಸದ ಜಯಂತ ಸಿನ್ಹಾ ಹಾರ ಹಾಕಿ ಮಿಠಾಯಿ ತಿನ್ನಿಸಿ ಸ್ವಾಗತಿಸಿದರು. ಜಯಂತ ಸಿನ್ಹಾ ಬಲಪಂಥೀ ಪಕ್ಷದ ಕಾವಿ ವಸ್ತ್ರದ ಗೋರಕ್ಷಕರಲ್ಲ. ಬದಲಿಗೆ ಆತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಹಾರ್ಡವರ್ಕ್ ಮಾಡುತ್ತಿದ್ದ ಬುದ್ಧಿಜೀವಿ ಮಂತ್ರಿಯಾಗಿದ್ದರು. ಇದು ಪ್ರಹಸನವಲ್ಲ, ಸುದ್ದಿ. ರಾಜಸ್ಥಾನದ ಅಲ್ವರ್ ಜಿಲ್ಲೆಯ ರಾಮಗರ್‌ನಲ್ಲಿ ಗೋಕಳ್ಳಸಾಗಣೆ ಮಾಡುತ್ತಿದ್ದಾನೆನ್ನುವ ಆಪಾದನೆಯ ಮೇಲೆ ನಿರ್ಮಮಕಾರವಾಗಿ ರಕ್ಬರ ಖಾನನ ಮೇಲೆ ಮಾರಕ ಹತ್ಯೆಯನ್ನು ಗೋರಕ್ಷಕರು ಮಾಡಿದರು. ಗಾಯಗೊಂಡ ರಕ್ಬರನನ್ನು ಆಸ್ಪತ್ರೆಗೆ ಒಯ್ಯುವ ಬದಲಿಗೆ ಗೋವುಗಳನ್ನು ಗೋರಕ್ಷಣಾ ಕೇಂದ್ರಕ್ಕೆ ಒಯ್ಯುವುದೇ ಪೊಲೀಸರ ಪ್ರಾಧಾನ್ಯತೆಯಾಗಿತ್ತು. ಇದರಲ್ಲಿ ಆಪಾದನೆ ಪತ್ರವನ್ನು ಸುಮಾರು ಎರಡು ತಿಂಗಳುಗಳ ಕೋರ್ಟಿಗೆ ಸಲ್ಲಿಸಲಾಯಿತು. ಇದು ಪೊಲೀಸು ವಿಭಾಗದ ಕಾರ್ಯತತ್ಪರತೆಯ ಮಾತಲ್ಲ, ಸುದ್ದಿ.
ಉತ್ತರಪ್ರದೇಶದ ದಾದ್ರಿಯಲ್ಲಿ ಮಹಮ್ಮದ್ ಅಖ್ಲಾಕ್ ಗೋಮಾಂಸ ಇಟ್ಟಿದ್ದಾನೆನ್ನುವ ಶಂಕೆಯ ಮೇಲೆ ಜನರು ಅವನ ಮನೆಗೆ ನುಗ್ಗಿ ನಿರ್ಮಮಕಾರವಾಗಿ ಚಚ್ಚಿ ಕೊಂದರು. ಅಲ್ಲಿಗೆ ಬಂದ ಪೊಲೀಸರು ಮೊದಲಿಗೆ ಆ ಮಾಂಸ ಗೋವಿನದ್ದೋ ಅಲ್ಲವೋ ಅನ್ನುವ ಪರೀಕ್ಷೆಗೆ ಒಳಪಡಿಸುವ ಕ್ರಮ ಕೈಗೊಂಡರು. ಈಚೆಗೆ ಅದರಲ್ಲಿ ಆಪಾದಿತನಾಗಿದ್ದ ವ್ಯಕ್ತಿ ಅಲ್ಲಿನ ಮುಖ್ಯಮಂತ್ರಿಗಳ ಕಾರ್ಯಕ್ರಮವೊಂದರಲ್ಲಿ ಪ್ರಮುಖ ಸ್ಥಾನದಲ್ಲಿದ್ದ. ಇದು ತನಿಖೆಯ ರೀತಿಯ ವಿವರಣೆಯಲ್ಲ. ಸುದ್ದಿ.

ನಮಗೆ ಸಮಾಧಾನವಾಗಬೇಕು. ಗಾರ್ಸಿಯಾ ಮಾರ್ಕೇಸ್ 1954ರಷ್ಟು ಹಿಂದೆ ಬರೆದದ್ದನ್ನು ನಾವು ಇಂದಿಗೆ ಕಾಣುತ್ತಿದ್ದೇವೆ.

ಒಂದಿಡೀ ರಾಜ್ಯವೇ ದೇಶದಿಂದ ಕಳುವಾಗಿದೆ. ರಾಜ್ಯ ಗಾತ್ರದ ಜೈಲು ನಿರ್ಮಾಣವಾಗಿದೆ. ಅಫ್ಕೋರ್ಸ್ ಎಲ್ಲೂ ಸಾವುನೋವುಗಳಾಗಿಲ್ಲ. ಯಾವುದೇ ಜೈಲಿನಲ್ಲಿ ಸಾವುನೋವುಗಳಾಗುವುದಿಲ್ಲ. ಅಲ್ಲಿ ಆಗಬಹುದಾದ್ದು ಕಸ್ಟೋಡಿಯಲ್ ಡೆತ್ ಅಥವಾ ಗಲ್ಲು ಶಿಕ್ಷೆ ಮಾತ್ರ. ಕಾರಾಗಾರದಲ್ಲಿ ಸ್ಮಶಾನಮೌನವಿಲ್ಲದಿದ್ದರೂ ಸ್ಮಶಾನ ಶಾಂತಿಯಿರುತ್ತದೆ. ಹತ್ತಿರಹತ್ತಿರ ಒಂದು ತಿಂಗಳಿನಿಂದ ಒಂದಿಡೀ ರಾಜ್ಯಕ್ಕೆ ಟಾಕ್ ಇಲ್ಲ, ಟಾಕ್ ಟೈಂ ಇಲ್ಲ, ನೆಟ್ ಇಲ್ಲ, ಡೇಟಾ ಇಲ್ಲ, ಜಿಯೋ ಇಲ್ಲ. ರಸ್ತೆಯಲ್ಲಿ ಜನಸಂಚಾರವಿಲ್ಲ. ಸ್ಥಳೀಯ ರಾಜಕೀಯ ನಾಯಕರು ಕಾರಣವಿಲ್ಲದೇ ಬಂಧನದಲ್ಲಿದ್ದಾರೆ. ಇದು ನಿರಂತರ ಸುದ್ದಿಯಾಗಬೇಕಿತ್ತು. ಇಲ್ಲ ಇದು ಸುದ್ದಿಯಲ್ಲ. ಬದಲಿಗಿದು ರಾಷ್ಟ್ರಭಕ್ತಿಯ ಪ್ರತೀಕ. ಒಂದು ರಾಷ್ಟ್ರವ್ಯಾಪಿ ಪ್ರತಿಭಟನೆಯಿಲ್ಲದೆಯೇ – ಹಾಗೇ ಆಗಬೇಕು- ಹಲ್ಲು ಮುರೀಬೇಕು – ನೀನಳಬೇಕು, ನಾನಗಬೇಕು – ಎನ್ನುತ್ತಾ ನಾವು ರಾಜ್ಯ ಕಳಕೊಂಡವರನ್ನು ಲೇವಡಿ ಮಾಡುತ್ತಿದ್ದೇವೆ. ಒಂದು ಮೊಬೈಲ್ ನೀರಿಗೆ ಬಿದ್ದರೆ ವಿಲವಿಲಾ ಒದ್ದಾಡುವ ನಾವು ಒಂದಿಡೀ ರಾಜ್ಯವನ್ನೇ ಕಳಕೊಂಡವರ ನೋವನ್ನು ಅರಿಯುವುದು ಹೇಗೆ…. ಇದು ಖಂಡಿತವಾಗಿಯೂ ಸುದ್ದಿಯಲ್ಲ. ಬದಲಿಗೆ ಇದು ಕಾವ್ಯ. ಯಾವ ಪ್ರಕಾರದ ಸಾಹಿತ್ಯವೋ ಗೊತ್ತಿಲ್ಲ.

ಆದರೆ ಆರ್.ಬಿ.ಐ ಸರಕಾರಕ್ಕೆ ಕೊಟ್ಟ ಹಣ, ಲೈಂಗಿಕ ವಿಡಿಯೋ ನೋಡುತ್ತಿದ್ದವರು ಯಡ್ಯೂರಪ್ಪನವರ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿಯಾದದ್ದು, ಈಶ್ವರಪ್ಪನವರ ಅಸಮಾಧಾನ, ನಂತರ ದೆಹಲಿಯ ಸೂಚನೆಯ ಮೇರೆಗೆ ಆದ ಸಮಾಧಾನ. ಇದು ನಿಜಕ್ಕೂ ಸುದ್ದಿ. ಇಲ್ಲಿ ಪ್ರಹಸನವಿಲ್ಲ. ಒಬ್ಬ ಐಎಎಸ್ ಅಧಿಕಾರಿ ಪ್ರತಿಭಟನೆ ಸೂಚಿಸುತ್ತಾ ರಾಜೀನಾಮೆ ಕೊಟ್ಟಿದ್ದಾರೆ. ಅವರ ಉದ್ದೇಶ ಈಗ ಕೇಂದ್ರಶಾಸಿತ ಪ್ರದೇಶಗಳಾಗಿರುವ ಹಿಂದಿನ ರಾಜ್ಯದ ಬಗ್ಗೆ ಚರ್ಚೆಯಾಗಲಿ ಎನ್ನುವುದು. ಬದಲಿಗೆ ಆತನೇ ಸುದ್ದಿಯಾಗಿದ್ದಾರೆ. ಅವರ ಪೂರ್ವಾಪರಗಳನ್ನು ಜಾಲಾಡುತ್ತಿದ್ದೇವೆ. 1984ರಲ್ಲಿ ಯಾಕೆ ಆತ ರಾಜೀನಾಮೆ ಕೊಡಲಿಲ್ಲ. 1977 ಆತ ಎಲ್ಲಿದ್ದರೆಂದು ಪ್ರಶ್ನಿಸುತ್ತೇವೆ. 1977 ಆತ ಹುಟ್ಟಿರಲಿಲ್ಲ, 1984ರಲ್ಲೂ ಹುಟ್ಟಿರಲಿಲ್ಲ ಎನ್ನುವ ಮಾತು ಮುಖ್ಯವಲ್ಲ. ಸುದ್ದಿಯಾಗಿರುವ ಅವರನ್ನೂ ಎರಡು ದಿನಗಳಲ್ಲಿ ಮರೆಯುತ್ತೇವೆ. ಪ್ರಶ್ನೆ ಕೇಳುವ ಧೈರ್ಯ, ಭಿನ್ನಮತ ವ್ಯಕ್ತಪಡಿಸುವ ಹಿಕ್ಮತ್ತು ಎಲ್ಲಿಂದ ಬಂತು ಅನ್ನುವುದೇ ಮುಖ್ಯವಾಗುತ್ತದೆ. ಇದು ಸುದ್ದಿಯಲ್ಲ, ಸಾಹಿತ್ಯವಲ್ಲ. ಇದೇ ಚರ್ಚೆ. ಮೂಲ ವಿಷಯ ಇನ್ನೂ ಸುದ್ದಿಯಾಗಿಲ್ಲ.
ಸಾಹಿತ್ಯಕ್ಕೆ ಇದು ಒಳ್ಳೆಯ ಕಾಲವಲ್ಲ. ಮಾಂತ್ರಿಕ ವಾಸ್ತವ ಎನ್ನುತ್ತಿದ್ದುದು ನೈಜವಾಗುತ್ತಿದೆ. ಕಾಫ್ಕಾನ ಪ್ರಪಂಚವೇನೆಂದು ಸುಧಾ ಭಾರದ್ವಾಜ್, ವರವರರಾವು, ಗೌತಮ್ ನವಲಖ, ಸುರೇಂದ್ರ ಗಾಡ್ಲಿಂಗ್, ಮಹೇಶ್ ರೌತ್, ಸುಧೀರ್ ಧಾವ್ಲೆ, ರೋನಾ ವಿಲ್ಸನ್, ಶೋಮಾ ಸೇನ್, ಅರುಣ್ ಫರೇರಾ, ವರ್ನಾನ್ ಗೊನ್ಜಾಲ್ವಿಸ್ ಕಂಡುಕೊಳ್ಳುತ್ತಿದ್ದಾರೆ. ಆನಂದ್ ತೇಲ್ತುಂಬ್ಡೆ ಕಾಫ್ಕಾನ ಪುಸ್ತಕದ ಮುಖಪುಟವನ್ನು ತೆರೆಯುತ್ತಿದ್ದಾರೆ. ವಾರ್ತೆಗಳೇ ಮಾಂತ್ರಿಕ ವಾಸ್ತವದಂತೆ, ಅತಿವಾಸ್ತವವಾದದಂತೆ ಕಂಡರೆ ಇನ್ನು ಸಾಹಿತ್ಯ ಎಲ್ಲಿಗೆ ಹೋಗಬೇಕು…

ಎರಡನೆ ಮಹಾಯುದ್ಧದ ನಂತರ ಬಂದ ಅಸ್ತಿತ್ವವಾದಿ ಸಾಹಿತ್ಯ ಯುದ್ಧದ ಸರ್ವನಾಶದ ಗೋರಿಯ ಮೇಲೆ ಬೆಳೆಯಿತು. ಬೆಕೆಟ್ ಬರೆದ ‘ವೈಟಿಂಗ್ ಫರ್ ಗೋಡೋ’ ಎನ್ನುವ ಅಸಂಗತ ನಾಟಕದ ಹಿನ್ನೆಲೆಯಲ್ಲಿ ಯುದ್ಧ, ಏಕತಾನತೆ, ಅತಿವಾಸ್ತವ, ದೇವರು, ತತ್ವಶಾಸ್ತ್ರ ಏನೆಲ್ಲಾ ಇರಬಹುದು ಎಂದು ಟಿಪ್ಪಣಿಕಾರರು ಬರೆದಿದ್ದಾರೆ. ಗಾರ್ಸಿಯಾ ಮಾರ್ಕೆಸ್ 1954ರಲ್ಲಿಯೇ ಮಾಧ್ಯಮವು ಸಾಹಿತ್ಯವಾಗುತ್ತಿರುವುದನ್ನೂ, ಅತಿರೇಕವು ಸಾಧಾರಣವಾಗುತ್ತಿರುವುದನ್ನೂ ಗ್ರಹಿಸಿದ್ದರು. ಅದರ ಪುನರಾವರ್ತನೆ ಇಲ್ಲಿ, ಹೀಗೆ ಆಗುತ್ತಿದೆ.

ಇದರಿಂದ ಉತ್ಕೃಷ್ಟ ಸಾಹಿತ್ಯ ಬಂದೇ ಬರುತ್ತದೆ. ಉತ್ಕೃಷ್ಟ ಜೀವನ ಬರುತ್ತದೆಯೇ? ಗೊತ್ತಿಲ್ಲ. ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ ಎನ್ನುವುದ ಕವಿಗಳ ಪ್ರಶ್ನೆ. ಉತ್ತರ ನಮಗೆ ಗೊತ್ತಿದೆ, ಅಥವಾ ಗೊತ್ತಿಲ್ಲದಿದ್ದರೂ ನಷ್ಟವಿಲ್ಲ. ಪ್ರಶ್ನೆ ಮುಖ್ಯ. ಯಾಕಂದರೆ ಆ ಪ್ರಶ್ನೆಯಿದ್ದಷ್ಟೂ ದಿನ ಯಾರಿಗೋ ಸ್ವಾತಂತ್ರ ಬಂದಿಲ್ಲವೆನ್ನುವುದು ನೆನಪಿನಲ್ಲಿರುತ್ತದೆ. ಆ ಕವಿಗಳನ್ನು ಮರೆತರೂ ಪ್ರಶ್ನೆಯುಳಿಯುತ್ತದೆ. ಬೆಳವಣಿಗೆ ವಿಕಾಸದ ಕಥೆಗಳು ಮಾಹಿತಿಯಲ್ಲಿ ಸಿಗುತ್ತವೆ. ಅದರಿಂದ ಪೀಡಿತರಾದವರ ಕಥೆಗಳು ಸಾಹಿತ್ಯದಲ್ಲಿ ಸಿಗುತ್ತದೆ. ಔದ್ಯೋಗಿಕ ಕ್ರಾಂತಿಯ ಆರ್ಥಿಕ ವಿಕಾಸ ಮಾಹಿತಿಯಲ್ಲಿದೆ. ಅದರ ಕರಾಳತೆಯನ್ನನ್ನುಭವಿಸಿದವರ ಕಥೆಗಳು ಚಾರ್ಲ್ಸ್ ಡಿಕನ್ಸ್, ಜೋಲಾ, ಬ್ಲೇಕ್ ಸಾಹಿತ್ಯದಲ್ಲಿ ಸಿಗುತ್ತೆ. ಎಂದು ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದ ಎಡ್ಮಂಡ್ ಫೆಲ್ಪ್ಸ್ ಹೇಳಿದ್ದರು. ಸಾಹಿತ್ಯದ ನೊಬೆಲ್ ಪಡೆದವರು, ಅರ್ಥಶಾಸ್ತ್ರದ ನೊಬೆಲ್ ಪಡೆದವರ ಜೊತೆ ಕಾಲಾಂತರದಲ್ಲಿಂದು ಭಾರತದಲ್ಲಿ ಕೈಕುಲುಕುತ್ತಿದ್ದಾರೆ.