ವಿದ್ಯಾರಾಣಿ ತಯಾರಿಸಿದ ಕೈಮಾ ಬಿರಿಯಾನಿ ಮತ್ತು ಧಿಡೀರ್ ಮಟನ್ ಮಸಾಲಾ

0
70

ಅಡುಗೆಯೊಂದಿಗೆ ಮಾತನಾಡುತ್ತ ಮಾಡಿದರೆ ತಿನ್ನುವವರ ಹೃದಯಕ್ಕೂ ತಲುಪುತ್ತದೆ ಎನ್ನುತ್ತ ಅಡುಗೆ ಮನೆಯೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಬೆಸೆದುಕೊಂಡಿರುವ ವಿದ್ಯಾರಾಣಿಯವರು ಮೈಸೂರುವಾಸಿ. ಆಹಾರ ಮತ್ತು ಪೋಷಣೆ ಎಂಬ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿರುವ ಇವರಿಗೆ ಅಡುಗೆ ಮಾಡಿ ಉಣಿಸುವುದೆಂದರೆ ಸಂಭ್ರಮವಂತೆ. ನಾಲ್ಕನೇ ತರಗತಿಯಿಂದಲೆ ಕವಿತೆ ಬರೆಯಲು ಆರಂಭಿಸಿದ ವಿದ್ಯಾ ಇಂದಿಗೂ ತಮ್ಮ ಬರಹಗಳಿಗೆ ನಿತ್ಯದ ಸಮಯವನ್ನು ಮೀಸಲಿರಿಸಿದ್ದಾರೆ. ಛಾಯಾಗ್ರಹಣ, ಚಿತ್ರ ಬಿಡಿಸುವುದು ಇವರ ಹವ್ಯಾಸ. ಜೊತೆಗೆ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಇವರಿಗೆ ತಮ್ಮ ತೋಟದಲ್ಲಿ ಕೆಲಸ ಮಾಡುವುದು ಬಲು ಇಷ್ಟವಂತೆ, ಆರೋಗ್ಯಕರ ಬದುಕಿಗೆ ದೈನಂದಿನ ಯೋಗ, ವ್ಯಾಯಾಮದೊಂದಿಗೆ ನಾವು ತಿನ್ನುವ ಆಹಾರ ಅಷ್ಟೇ ಮುಖ್ಯವೆನ್ನುವ ಸ್ನೇಹಜೀವಿ ವಿದ್ಯಾರಾಣಿಯವರು ಇಂದಿನ ಕಿಚನ್ ಮಸಾಲಾದಲ್ಲಿ ಕೈಮಾ ಬಿರಿಯಾನಿ ಹಾಗೂ ಧಿಡೀರ್ ಮಟನ್ ಮಸಾಲಾ ಮಾಡಿದ್ದಾರೆ.

ಕೈಮಾ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು :
ಒಂದು ಕೆ.ಜಿ ಕೈಮಾ, ಒಂದು ಕೆ.ಜಿ ಬಾಸುಮತಿ ಅಕ್ಕಿ, ರುಬ್ಬಲು ಈರುಳ್ಳಿ ಒಂದು, ಬೆಳ್ಳುಳ್ಳಿ ಐದು ದೊಡ್ಡ ಉಂಡೆ, ಶುಂಠಿ ಮೂರು ಇಂಜು, ಚಕ್ಕೆ ಆರು, ಲವಂಗ ಆರು, ಮೆಣಸಿನ ಕಾಳು ಒಂದು ಚಮಚ, ಹಸಿಮೆಣಸಿನಕಾಯಿ ಇಪ್ಪತ್ತು, ಐದು ಗುಂಟೂರು ಮೆಣಸು, ಬ್ಯಾಡಗಿ ಮೆಣಸು ಐದು, ಕಾಯಿ ತುರಿ ಒಂದು ಚಮಚ ಇವಿಷ್ಟನ್ನೂ ಒಂದು ಚಮಚ ಎಣ್ಣೆ ಹಾಕಿ ಹುರಿದು ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ, ಒಗ್ಗರಣೆಗೆ ನಾಲ್ಕು ಈರುಳ್ಳಿ, ಏಲಕ್ಕಿ ಹತ್ತು, ಎರಡು ಬಿರಿಯಾನಿ ಎಲೆ, ಮೆಂತ್ಯಾ ಸೊಪ್ಪು ಒಂದು ಕಟ್ಟು, ಅರಿಶಿನ ಒಂದು ಚಮಚ, ಟೊಮ್ಯಾಟೊ ಐದು, ಕಾಲು ಲೀಟರ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಕಾಲು ಲೀಟರ್ ಎಣ್ಣೆಯಲ್ಲಿ ಈರುಳ್ಳಿ, ಏಲಕ್ಕಿ, ಬಿರಿಯಾನಿ ಎಲೆ, ಮೆಂತ್ಯೆ ಸೊಪ್ಪು, ಅರಿಶಿನಿ, ಟೊಮ್ಯಾಟೊ ಹಾಕಿ ಚೆನ್ನಾಗಿ ಹುರಿದು ಕೈಮಾ ಹಾಕಿ ಸ್ವಲ್ಪ ಸಮಯದ ನಂತರ ರುಬ್ಬಿರುವ ಮಸಾಲೆಯನ್ನು ಸೇರಿಸಿ ರುಚಿಗೆ ಉಪ್ಪು ಹಾಕಿ ಹತ್ತು ನಿಮಿಷ ಹುರಿಯಿರಿ, ಅಕ್ಕಿ ಅಳತೆಯಷ್ಟೇ ನೀರು ಹಾಕಿ ಹದಿನೈದು ನಿಮಿಷ ಕುದಿಯಲು ಬಿಡಿ, ನಂತರ ಅಕ್ಕಿ, ಒಂದು ಬಟ್ಟಲು ಮೊಸರು ಬೆರೆಸಿ ಬೇಯಿಸಿ, ಅಕ್ಕಿ ಅರ್ಧ ಬೆಂದಮೇಲೆ ಒಲೆಯ ಮೇಲೆ ಕಬ್ಬಿಣದ ತವೆ ಇಟ್ಟು ದಮ್ ಕೊಟ್ಟರೆ ಕೈಮ ಬಿರಿಯಾನಿ ಸಿದ್ಧ, ಅದರ ಮೇಲೆ ಕೊತ್ತಂಬರಿ ಹಾಗೂ ಪುದೀನಾ ಸೊಪ್ಪು ಉದುರಿಸಿ ಕುಟುಂಬ ಸಮೇತ ಕೈಮಾ ಬಿರಿಯಾನಿ ಸವಿಯಿರಿ.

ಧಿಡೀರ್ ಮಟನ್ ಮಸಾಲಾ

ಬೇಕಾಗುವ ಸಾಮಗ್ರಿಗಳು :

ಒಂದು ಕೆ.ಜಿ ಮಟನ್, ಎರಡು ಚಮಚ ಎಣ್ಣೆ, ಒಂದು ಕಟ್ಟು ಮೆಂತ್ಯಾ ಸೊಪ್ಪು, ಮೂರು ಈರುಳ್ಳಿ, ಬಿಡಿಸಿ ಹೆಚ್ಚಿಟ್ಟ ಬೆಳ್ಳುಳ್ಳಿ ಒಂದು ಕಪ್, ಶುಂಠಿ ಎರಡು ಇಂಚು, ಮೆಣಸಿನ ಪುಡಿ ಒಂದು ಚಮಚ, ಧನಿಯಾ ಪುಡಿ ಒಂದು ಚಮಚ, ಅಚ್ಚಖಾರದ ಪುಡಿ ಎರಡು ಚಮಚ, ಅರಿಶಿನ ಒಂದು ಚಮಚ, ಮುಸುಕಿನ ಜೋಳ, ರುಚಿಗೆ ಉಪ್ಪು.
ತಯಾರಿಸುವ ವಿಧಾನ : ಕುಕ್ಕರ್‌ನಲ್ಲಿ ಕಾದ ಎಣ್ಣೆಗೆ ಈರುಳ್ಳಿ, ಬೆಳ್ಳುಳ್ಳಿ, ತುರಿದ ಶುಂಠಿ, ಮೆಂತ್ಯಾ ಸೊಪ್ಪು ಹಾಕಿ ಹುರಿದುಕೊಳ್ಳಿ ನಂತರ ಕತ್ತರಿಸಿ ತೊಳೆದ ಮಟನ್ ಹಾಕಿ ನೀರಿನಂಶ ಹೋಗುವವರೆಗೂ ಚೆನ್ನಾಗಿ ಹುರಿದು ನಂತರ ಮೆಣಸಿನ ಪುಡಿ, ಧನಿಯಾ ಪುಡಿ, ಅಚ್ಚಖಾದರ ಪುಡಿ, ಅರಿಶಿನ, ರುಚಿಗೆ ತಕ್ಕ ಉಪ್ಪು ಹಾಕಿ, ಒಂದು ಅಥವಾ ಎರಡು ಬಟ್ಟಲು ನೀರು ಹಾಕಿ ಕುಕ್ಕರ್ ಮುಚ್ಚುಳ ಮುಚ್ಚಿ ಎರಡು ವಿಷೆಲ್ ಬರಿಸಿ ಇಳಿಸಿ ಕಡೆಯಲ್ಲಿ ಬೇಯಿಸಿಕೊಂಡಿರುವ ಮುಸುಕಿನ ಜೋಳವನ್ನು ಹಾಕಿ ಕೊತ್ತಂಬರಿಸೊಪ್ಪು ಉದುರಿಸಿ ರುಚಿಯಾದ ಮಟನ್ ಮಸಾಲಾವನ್ನು ಚಪಾತಿ, ರೊಟ್ಟಿಯೊಂದಿಗೆ ಸೇವಿಸಿ.

 

 

 

 

 

 

(ನಿರೂಪಣೆ:ಶಭಾನಾ) (ಫೋಟೋಗಳು: ರವಿ ಗವಿಮಠ)