ಸ್ವರಮಾಂತ್ರಿಕನಿಗೆ ಮೈಸೂರಲ್ಲಿಂದು ಅಭಿನಂದನೆ

0
23

ಸುಮಂಗಲಾ

ಎಂಬತ್ತೇಳರ ಹರೆಯದಲ್ಲಿಯೂ ಬೆಳಗ್ಗೆ, ಸಂಜೆ ಸರೋದ್ ಹಿಡಿದು ರಿಯಾಜ್ ಎಂಬ ಸ್ವರಧ್ಯಾನದಲ್ಲಿ ಕಳೆದುಹೋಗುವ ಪಂ. ರಾಜೀವರಿಗೆ ಪದ್ಮಶ್ರೀಯ ಗೌರವ ಸಂದಿದೆ. ಎಂದಿಗೂ ಪ್ರಶಸ್ತಿಗಳ ಹಿಂದೆ ಬೀಳದ ಪಂ.ರಾಜೀವರಿಗೆ ಇಂದು ಮಾನಸಗಂಗೋತ್ರಿಯಲ್ಲಿ ಗೌರವಾರ್ಪಣೆಯ ಸಂದರ್ಭದಲ್ಲಿ ಸುಮಂಗಲಾ ಬರಹ

ಅದು 1960ನೇ ಇಸ್ವಿ. ಬನುಮಯ್ಯ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತ, ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ಮಾಡುತ್ತಿದ್ದ 28ರ ಆ ಎತ್ತರದ ಸ್ಫುರದ್ರೂಪಿ ಯುವಕ ಬಹಳಷ್ಟು ಜನರ ಗಮನ ಸೆಳೆದಿದ್ದ. ಯುವಕನ ಹಿಂದಿನ ಪ್ರಭಾವಳಿ ಮತ್ತು ಆತನ ಖುದ್ದು ಸಾಧನೆ ಅಂಥದಿತ್ತು. ಆಗಿನ ಕಾಲಕ್ಕೆ ಕ್ರಾಂತಿಕಾರಿಯೆಂದು ಹೆಸರಾಗಿದ್ದ ಘನವಿದ್ವಾಂಸರಾದ ಪಂ. ತಾರಾನಾಥ ಮತ್ತು ಸುಮತೀಬಾಯಿಯವರ ಮಗನೆಂಬ ಅಂಶದಷ್ಟೇ ಮಹತ್ವವಾಗಿದ್ದು ಖ್ಯಾತ ಸರೋದ್ ವಾದಕ ಅಲಿ ಅಕ್ಬರ್‍ ಖಾನರ ಶಿಷ್ಯನಾಗಿ ಆರು ವರ್ಷಗಳ ಕಾಲ ಕಲ್ಕತ್ತೆಯಲ್ಲಿ ಸರೋದ್‍ ಕಲಿತು ಬಂದಿದ್ದಾರೆ ಎಂಬುದು. ಹಾಗೆ ಸರೋದ್ ಮಾಯೆಯ ಬೆಂಬತ್ತಿ ಹೋಗುವ ಮೊದಲು ಬಾಲಕಲಾವಿದನಾಗಿ ಹಿಂದೂಸ್ತಾನಿ ಗಾಯನದಲ್ಲಿ ಹೆಸರು ಮಾಡಿದ್ದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್‍ ಪದವಿಯಲ್ಲಿ ಮೊದಲ ರ್ಯಾಂಕ್ ಗಳಿಸಿ, ಅದೇ ಕಾಲೇಜಿನಲ್ಲಿ ಮಾಡುತ್ತಿದ್ದ ಉಪನ್ಯಾಸಕ ವೃತ್ತಿಯನ್ನು ತೊರೆದು ಹೋಗಿದ್ದರು ಎನ್ನುವುದು ಆ ಯುವಕನ ಸರೋದ್‍ ಮೇಲಿನ ಏಕನಿಷ್ಠೆಯನ್ನು, ತೀವ್ರ ಆಸಕ್ತಿಯನ್ನು ತೋರಿಸುತ್ತಿತ್ತು. ಹೀಗೆ ಅಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಬರಹಗಾರರು, ಕಲಾಕಾರರು ಅಚ್ಚರಿಯಿಂದ ದಿಟ್ಟಿಸುತ್ತಿದ್ದ ಆ ಯುವಕ ಪಂಡಿತ್ ರಾಜೀವ ತಾರಾನಾಥರು.
ರಾಯಚೂರಿನ ಬಳಿಯ ಮಂತ್ರಾಲಯದಲ್ಲಿ ತಂದೆ ತಾರಾನಾಥರು ಕಟ್ಟಿದ್ದ ಪ್ರೇಮಾಯತನ ಆಶ್ರಮಕ್ಕೆ ಆ ಕಾಲಘಟ್ಟದ ವಿದ್ವಾಂಸರು, ಸ್ವಾತಂತ್ರ ಹೋರಾಟಗಾರರು, ಸಂಗೀತಗಾರರು, ಬರಹಗಾರರು ಬಂದುಹೋಗುತ್ತಿದ್ದರು. ತಂದೆ, ತಾಯಿ ಅವರೊಂದಿಗೆ ಚರ್ಚಿಸುವಾಗ ಪುಟ್ಟ ರಾಜೀವರು ಅಲ್ಲಿಯೇ ಇರುತ್ತಿದ್ದರು. ಹೀಗಾಗಿ ಬಲುಚಿಕ್ಕವಯಸ್ಸಿನಲ್ಲಿಯೇ ಅವರಿಗೆ ‘ದೊಡ್ಡತನ’, ‘ಔದಾರ್ಯ’ದ ಮಾದರಿಗಳು ದಕ್ಕಿದವು. ಎಳೆಯ ಕಣ್ಣುಗಳಲ್ಲಿ ತೆರೆದುಕೊಂಡ ಆ ಎಲ್ಲ ಉದಾತ್ತ ಮಾದರಿಗಳನ್ನು ಮುಂದೆ ತಮ್ಮೊಳಗೇ ಆಳವಾಗಿ ಮೈಗೂಡಿಸಿಕೊಂಡರು.
ಜಾತಿಧರ್ಮಮತಗಳನ್ನು ಮೀರಿದ ಶುದ್ಧಾಂತಃಕರಣದ ಜೀವಸೆಲೆಯೊಂದು ಸುತ್ತ ಆವರಿಸಿದ ಪ್ರೇಮಾಯತನದ ಪರಿಸರದಲ್ಲಿ, ಕಲೆ, ಶಿಕ್ಷಣ, ಸಂಗೀತ, ಸಮಾಜಸುಧಾರಣೆ ಹೀಗೆ ಹತ್ತುಹಲವು ರೀತಿಯಲ್ಲಿ ತೊಡಗಿಸಿಕೊಂಡ ಒಂದು ಹರಿತ ವೈಚಾರಿಕತೆಯ ಕುಟುಂಬದಲ್ಲಿ ರಾಜೀವರು ಬೆಳೆದರು. ಸಮಾಜದಲ್ಲಿ ಬೇರುಬಿಟ್ಟ ಜಾತಿ ತಾರತಮ್ಯ, ಅಸಹಿಷ್ಣುತೆ ವಿರುದ್ಧ ನಿಷ್ಟುರವಾಗಿ ದನಿಯೆತ್ತುವವರಲ್ಲಿ ರಾಜೀವರು ಮೊದಲಿಗರು. ಮುಕ್ತ ಚಿಂತನೆ ಮತ್ತು ಸಮಾನತೆಯ ಸಮಸಮಾಜವನ್ನು ಸದಾ ಎತ್ತಿ ಹಿಡಿಯುವ ರಾಜೀವರಿಗೆ ಎಲ್ಲೆಡೆ ಹಬ್ಬಿರುವ ಫ್ಯಾಸಿಸ್ಟ್ ಶಕ್ತಿಗಳ ಅರಚಾಟ ಮನಸ್ಸಿಗೆ ತೀವ್ರ ಕಸಿವಿಸಿ ಉಂಟುಮಾಡುತ್ತದೆ.
ಕಲಾವಿದರು ನಮ್ಮ ಸುತ್ತಲಿನ ಆಗುಹೋಗುಗಳ ಕುರಿತು ಮಾತನಾಡಬಾರದು, ಏನನ್ನೂ ಪ್ರಶ್ನಿಸಬಾರದು ಎಂಬೊಂದು ಮನೋಭಾವ ಎಲ್ಲೆಡೆ ಹೆಬ್ಬಾವಿನ ಹಾಗೆ ಸುತ್ತಿಕೊಳ್ಳುತ್ತಿದೆ.
“ಕಲಾವಿದರಿಗೆ ಅವರ ಕಲೆ, ಸಂಗೀತವೇ ಸರ್ವಸ್ವ. ಕಲಾವಿದರು ಗಡಿರೇಖೆಗಳನ್ನು ಮೀರಿದವರು. ನಮ್ಮ ಗಡಿಗಳೇನಿದ್ದರೂ ನಮ್ಮ ಕಲೆಯ ಒಳಗೇ ಇರುತ್ತದೆ. ಹೀಗಾಗಿ ಕಲಾವಿದರಿಗೆ ರಾಜಕೀಯದ ಬಣ್ಣ ಹಚ್ಚಬಾರದು. ನೀನು ಅದನ್ನು ಹಾಡಬೇಡ, ಹೀಗೆ ಬರೆಯಬೇಡ, ಆ ಚಿತ್ರ ಬಿಡಿಸಬೇಡ ಎಂದಾಗಲೀ ಅಥವಾ ನೀನು ಹಿಂಗೇ, ಇದನ್ನೇ ಹಾಡು, ಇದನ್ನೇ ಬರಿ ಎಂಬ ಒತ್ತಾಯಗಳನ್ನು ಹೇರಬಾರದು” ಎನ್ನುವ ರಾಜೀವರು ಕಲಾವಿದರಿಗೆ ಬೇಕು, ಬೇಡಗಳ ‘ಬೇಡಿ’ಯನ್ನು ತೊಡಿಸುವುದರ ವಿರುದ್ಧ ದಿಟ್ಟವಾಗಿ ದನಿಯೆತ್ತುತ್ತಾರೆ. ಸಂಗೀತದಷ್ಟೇ ಅಧಿಕಾರಯುತವಾಗಿ ಸಾಹಿತ್ಯ, ಸಂಸ್ಕೃತಿಯ ಕುರಿತೂ ಮಾತನಾಡಬಲ್ಲ ನಮ್ಮ ನಡುವಿನ ಏಕೈಕ ಮತ್ತು ಅಪರೂಪದ ಸಾಧಕ, ಕಲಾವಿದ ಪಂ. ರಾಜೀವರು ಎಂದರೆ ಉತ್ಪ್ರೇಕ್ಷೆಯೇನಿಲ್ಲ.

“ವಿನಮ್ರತೆ ಇಲ್ಲದಿದ್ದರೆ ಮುಂದೆ ಹೋಗೋದಕ್ಕೆ ಆಗೋದಿಲ್ಲ. ಖಾನ್ ಸಾಹೇಬರ ಬಗ್ಗೆ ಮಾತಾಡುವಾಗ ನಾನು ಎಲ್ಲೋ ಇರ್ತೀನಿ. ನನ್ನ ಜಗತ್ತು ಅದು” ಎನ್ನುವ ರಾಜೀವರು ಕಛೇರಿಯ ನುಡಿಸಾಣಿಕೆ ಇರಲಿ ಅಥವಾ ನಿತ್ಯದ ರಿಯಾಜ್ ಇರಲಿ, ಇದು ನನ್ನ ಖಾನ್ ಸಾಹೇಬರು ಕೊಟ್ಟಿದ್ದು ಎಂದು ನೆನೆಯುತ್ತಾರೆ. ‘ಅಲ್ಲಿ ಖಾನ್ ಸಾಹೇಬರಿದ್ದರು ಎಂದೇ ನಾನು ಇಲ್ಲಿ ಇದ್ದೇನೆ, ಅವರ ಶಿಷ್ಯ ಆಗಿರಲಿಲ್ಲ ಎಂದರೆ ಈ ಯಾವುದೂ ಸಾಧ್ಯವಿರುತ್ತಿರಲಿಲ್ಲ’ ಎನ್ನುತ್ತಾರೆ.
“ಎಂತಹ ಮೋಹಕ ಮನಸ್ಸಿನ ‘ಸ್ವರ’ ಮತ್ತು ಮಾಧುರ್ಯದ ನಾದವನ್ನು ರಾಜೀವರು ಹೊರಹೊಮ್ಮಿಸುತ್ತಾರೆ! ಅವರು ಮೀಟುವ ಪ್ರತಿ ಸ್ವರವೂ ಆಳವಾದ ಹಂಬಲಿಕೆಯ, ಮಧುರ ನಾದದ ಜಾಡನ್ನು ನಮ್ಮೊಳಗೆ ಉಳಿಸುತ್ತದೆ. ಚಿಂತನೆ ಮತ್ತು ಮನೋಧರ್ಮದ ಪ್ರೌಢತೆಯಲ್ಲಿ ರಾಜೀವರು ತಮ್ಮ ಸಮಕಾಲೀನ ಸರೋದ್ ವಾದಕರಿಗಿಂತ ಬಹಳ ಪ್ರತ್ಯೇಕವಾಗಿ ಮತ್ತು ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ.” ಎಂದು ಖ್ಯಾತ ಸಂಗೀತ ವಿಮರ್ಶಕ ಎಲ್. ಪ್ರಕಾಶ್ ವಢೇರಾ ಬಹಳ ವರ್ಷಗಳ ಹಿಂದೆಯೇ ಬರೆದಿದ್ದರು. ಹೀಗೆ ಸರೋದ್ ನುಡಿಸಾಣಿಕೆಯಲ್ಲಿ ಅತ್ಯುನ್ನತ ಶಿಖರವೇರಿದ ಅವರನ್ನು ಹಲವು ಸಮ್ಮಾನ, ಪ್ರಶಸ್ತಿಗಳು ಹುಡುಕಿ ಬಂದಿವೆ.

ಕಳೆದೊಂದು ದಶಕದಿಂದ ಮೈಸೂರಿನಲ್ಲಿಯೇ ನೆಲೆಸಿದ್ದಾರೆ ರಾಜೀವರು. ಹಾಗೆ ನೋಡಿದರೆ ಬೆಂಗಳೂರಿನ ನಂತರ ಅವರು ಹೆಚ್ಚಿನ ವರ್ಷಗಳನ್ನು ಕಳೆದಿರುವುದು ಮೈಸೂರಿನಲ್ಲಿಯೇ. 1968ರಲ್ಲಿ ಮೈಸೂರಿನಿಂದ ಹೊರಹೋದ ಮೂವತ್ತಾರರ ಹರೆಯದ ರಾಜೀವರಿಗೂ, 2009ರಲ್ಲಿ ಮತ್ತೆ ಮರಳಿದ 77ರ ಹರೆಯದ ರಾಜೀವರಿಗೂ ಖಂಡಿತಕ್ಕೂ ಭೂಮಿ ಆಕಾಶದ ಅಂತರವಿತ್ತು. ಹೈದರಾಬಾದಿನಲ್ಲಿ ಸಿಐಇಎಫ್‌ಎಲ್ ಆರಾಮದಾಯಕ ಪ್ರಾಧ್ಯಾಪಕ ವೃತ್ತಿಯನ್ನು ಬಿಟ್ಟುಕೊಟ್ಟು, ಸರೋದ್‍ಗೆ ಪೂರ್ಣವಾಗಿ ತನ್ನನ್ನೇ ತಾನು ಕೊಟ್ಟುಕೊಂಡು, ಖ್ಯಾತಿಯ ಒಂದೊಂದೇ ಮೆಟ್ಟಿಲೇರುತ್ತ ನಡೆದಿದ್ದ ಪಂ. ರಾಜೀವರು ವಯಸ್ಸಿನಲ್ಲಿ ಅನುಭವದಲ್ಲಿ ಮಾಗಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ನೋಡಿದಾಗ ಮೈಸೂರಿನಲ್ಲಿ ಅವರ ಅಭಿಮಾನಿಗಳು ಇಂದು ಹಮ್ಮಿಕೊಂಡಿರುವ ಈ ಅಭಿನಂದನಾ ಸಮಾರಂಭ ಅತ್ಯಂತ ಅರ್ಥಪೂರ್ಣ ಎನ್ನಿಸುತ್ತದೆ.