ಹಗಲೂ ಇರುಳೂ ಚೌಕಿದಾರ ಟಿಟ್ಟಿಭ ಹಕ್ಕಿ

0
28

ರೇಣು ಪ್ರಿಯದರ್ಶಿನಿ.ಎಂ
renu.priyadarshini.m@gmail.com

ವಿಟ್ಟೀಟಿಟೀವ್… ವಿಟ್ಟೀಟಿಟೀವ್ ಎಂಬ ತೀಕ್ಷ್ಣ ಕೂಗು ಸದ್ದು ರಾತ್ರಿಯ ನಿಶ್ಯಬ್ಧತೆಯನ್ನು ಸೀಳಿ ಬಂದಾಗ ಕಥೆ ಕೇಳುತ್ತ ಬೆಚ್ಚಗೆ ತಬ್ಬಿ ಮಲಗಿದ್ದ ಮಗ ದಿಗ್ಗನೆ ಎದ್ದು “ಅಮ್ಮಾ… ಪಕ್ಷಿ ಯಾಕೆ ಈ ಹೊತ್ತಿನಲ್ಲಿ ಕೂಗುತ್ತಿದೆ… ಯಾರನ್ನು ಕರೆಯುತ್ತಿದೆ…? ಎಂದು ಕೇಳಿದ. ರಾತ್ರಿಯ ಸಮಯದಲ್ಲಿ, ಮರಿಹಕ್ಕಿಗಳು ಮತ್ತು ಉಳಿದ ಎಲ್ಲಾ ಹಕ್ಕಿಗಳು ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಲು ಮತ್ತು ಎಲ್ಲಿಯಾದರೂ ಅಪಾಯ ಕಾಣಿಸಿದರೆ ಉಳಿದ ಪ್ರಾಣಿ ಪಕ್ಷಿಗಳಿಗೆ ಸೂಚನೆ ನೀಡಲು ಈ ರೀತಿ ಕೂಗುವುದೆಂದು ತಿಳಿಸುತ್ತಾ ಅವನನ್ನು ತಟ್ಟಿ ಮಲಗಿಸಿದೆ.

ವಿಶ್ವದಲ್ಲಿ, ಬಹುತೇಕ ಪಕ್ಷಿಗಳು ದಿನಕರನ್ನು ಸ್ತುತಿಸುತ್ತ ತಮ್ಮ ಬದುಕನ್ನು ಪ್ರಾರಂಭಿಸಿದರೆ ಕೆಲವು ನಿಶಾಚರಗಳ ಪಕ್ಷಿಗಳು ರಾತ್ರಿಯ ಹೊತ್ತಿನಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಬಹುದಕ್ಷತೆಯಿಂದ ನಿಭಾಯಿಸುತ್ತವೆ. ಇಂತಹ ನಿಶಾಚರ ಪಕ್ಷಿಗಳಲ್ಲಿ ಟಿಟ್ಟಿಭವು ಪ್ರಮುಖವಾದದ್ದು. ಪಾರಿವಾಳ ಗಾತ್ರದ ಉದ್ದಕಾಲಿನ, ನೀರ್ನಡೆಯ ಹಕ್ಕಿಯಾದ ಟಿಟ್ಟಿಭವು ಸಾಮಾನ್ಯವಾಗಿ ನೀರಿನ ಹರವು ಇರುವೆಡೆಯಲ್ಲಿ ಜೊತೆಯಾಗಿ ಅಥವಾ ಸಣ್ಣ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ.

ಭಾರತದಲ್ಲಿ ಸುಮಾರು ಐದು ಪ್ರಬೇಧಗಳ ಟಿಟ್ಟಿಭಗಳನ್ನು ದಾಖಲಿಸಿದ್ದು, ಮೈಸೂರಿನಲ್ಲಿ ಕೆಂಪು ಟಿಟ್ಟಿಭ ಮತ್ತು ಹಳದಿ ಟಿಟ್ಟಿಭಗಳನ್ನು ನೋಡಬಹುದು. ನಗರದ ಸುತ್ತಮುತ್ತಲಿನ ಕೆರೆಗಳ ಬಳಿ, ಕೃಷಿಭೂಮಿ, ಕೊಳದ ದಂಡೆ, ಗದ್ದೆ, ಹುಲ್ಲುಗಾವಲುಗಳ ಬಳಿ ಕೆಂಪು ಟಿಟ್ಟಿಭವು ಧಾರಾಳವಾಗಿ ಕಾಣಿಸಿಕೊಂಡರೆ ಹಳದಿ ಟಿಟ್ಟಿಭ ಕೊಂಚ ವಿರಳವಾಗಿ ಕಾಣಿಸಿಕೊಳ್ಳುತ್ತದೆ. ವ್ಯಾನೆಲಸ್ ಇಂಡಿಕಸ್ ಎಂಬ ವೈಜ್ಞಾನಿಕ ನಾಮ ಹೊಂದಿದ ಕೆಂಪು ಟಿಟ್ಟಿಭ ಪಶ್ಚಿಮ ಏಷ್ಯ ಮತ್ತು ದಕ್ಷಿಣ ಏಷ್ಯಾ ಖಂಡಗಳಲ್ಲಿ ವ್ಯಾಪಕವಾಗಿ ಹರಡಿದೆ. ಇದು ಸ್ಥಳೀಯ ಹಕ್ಕಿಯಾಗಿದ್ದರೂ ಕೆಲವೊಮ್ಮೆ ವಸಂತಕಾಲದಲ್ಲಿ ಇಲ್ಲವೇ ಶರತ್ಕಾಲದಲ್ಲಿ ಎತ್ತರದ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಪಕ್ಷಿತಜ್ಞರು ಗಮನಿಸಿದ್ದಾರೆ.

ತಿಳಿಗಂದು ಬಣ್ಣದ ಕೆಂಪು ಟಿಟ್ಟಿಭ ಹಕ್ಕಿಗೆ ತಲೆ ಮತ್ತು ಕುತ್ತಿಗೆ ಕಪ್ಪಾಗಿದೆ. ಇದರ ಕಿವಿಯ ಹಿಂಗತ್ತಿನಿಂದ ಹಿಡಿದು ಕೆಳಮೈವರೆಗೂ ಬಿಳಿಯ ವರ್ಣವನ್ನು ಹೊಂದಿರುವುದು. ಅಚ್ಚಗೆಂಪಿನ ಮಾಂಸಲ ಕಣ್ಣಿನ ಮುಂಭಾಗದಲ್ಲಿ ಪ್ರಧಾನವಾಗಿ ಎದ್ದು ತೋರುವುದರಿಂದ ಇದನ್ನು ಕೆಂಪು ಟಿಟ್ಟಿಭ ಅಥವಾ ರೆಡ್‍ವ್ಯಾಟಲ್ಡ್ ಲ್ಯಾಪ್‍ವಿಂಗ್ ಎಂದು ಕರೆಯುತ್ತಾರೆ. ತೇನೆ ಹಕ್ಕಿ ಎಂಬ ಹೆಸರನ್ನು ಸಹ ಹೊಂದಿರುವ ಈ ಹಕ್ಕಿಯ ಕಣ್ಣು ಹಾಗೂ ಕೊಕ್ಕು ಕೆಂಪಗಿದ್ದು, ಚೂಪಾದ ಕೊಕ್ಕಿನ ತುದಿ ಕಪ್ಪಗಿದೆ. ಹಳದಿ ಬಣ್ಣದ, ಉದ್ದಕಾಲಿನ ಈ ಹಕ್ಕಿಯು ಸೂರ್ಯ ನೇಪಥ್ಯಕ್ಕೆ ಸರಿಯುತ್ತಿದ್ದಂತೆ ಚುರುಕಾಗಿ ತನ್ನ ದೈನಂದಿನ ಕಾರ್ಯಕ್ಕೆ ಸನ್ನದ್ಧವಾಗುವುದು. ರಾತ್ರಿಯ ಹೊತ್ತಿನಲ್ಲಿ ಆಹಾರಾನ್ವೇಷಣೆಗೆ ತೊಡಗುತ್ತಾ, ಎಚ್ಚರಿಕೆಯಿಂದ ಕ್ಷೇತ್ರ ರಕ್ಷಣೆ ಮಾಡುತ್ತಾ ಅಪಾಯದ ಸೂಚನೆ ಕಂಡೊಡನೆ ಗುಲ್ಲೆಬಿಸುತ್ತಾ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಚಿತಾವಣೆ ನೀಡುವುದು. ಹಾಗಾಗಿ ರಾತ್ರಿಯ ಹೊತ್ತಿನಲ್ಲಿ ಟಿಟ್ಟಿಭದ ಕೂಗು ನಿಯಮಿತವಾಗಿ ಕೇಳಿ ಬರುತ್ತದೆ.

ಕೆಂಪು ಟಿಟ್ಟಿಭದ ಗಂಡು ಹಾಗೂ ಹೆಣ್ಣು ಹಕ್ಕಿಗಳು ನೋಡಲು ಒಂದೇ ರೀತಿಯಾಗಿದ್ದು ಮಾರ್ಚ್‌‌ನಿಂದ ಆಗಸ್ಟ್ ತಿಂಗಳವರೆಗೆ ಸಂತಾನಾಭಿವೃದ್ಧಿ ನಡೆಸುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿಯು ತನ್ನ ಸಂಗಾತಿಯನ್ನು ಒಲಿಸಿಕೊಳ್ಳಲು ರೆಕ್ಕೆ ಉಬ್ಬಿಸಿ, ಕೊಕ್ಕನ್ನು ಮೇಲಕ್ಕೆತ್ತಿ ವಿವಿಧ ಪ್ರಕಾರದ ಭಂಗಿಗಳನ್ನು ತೋರುವುದು. ಈ ನಿಶಾಚರ ಹಕ್ಕಿಯು ಉಳಿದ ಪಕ್ಷಿಗಳಂತೆ ಗೂಡು ಕಟ್ಟದೆ ಗಟ್ಟಿ ನೆಲದ ಮೇಲೆ ಕಲ್ಲಿನ ಮೇಲೆ ಅಥವಾ ಚಿಕ್ಕ ಕಲ್ಲುಗಳ ನಡುವೆ 3 ರಿಂದ 4 ಮೊಟ್ಟೆಗಳನ್ನು ಇಡುವುದು. ಇದರ ಮೊಟ್ಟೆಯ ಮೇಲೆ ಕಪ್ಪುಚುಕ್ಕಿಗಳಿದ್ದು, ಮಾಸಲು ಬಣ್ಣದ್ದಾಗಿರುತ್ತದೆ. ಇದನ್ನು ಹಿನ್ನೆಲೆಯಿಂದ ಪ್ರತ್ಯೇಕಿಸಿ ಹುಡುಕುವುದು ಬಲು ಕಷ್ಟಕರ ಸಂಗತಿ. ಇತ್ತೀಚಿನ ನಗರೀಕರಣಕ್ಕೆ ಹೊಂದಿಕೊಂಡಿರುವ ಕೆಂಪು ಟಿಟ್ಟಿಭಗಳು ಮನೆಯ ಮಾಳಿಗೆಯ ಮೇಲೆ, ರೈಲ್ವೇ ಹಳಿಗಳ ನಡುವಿನ ಕಲ್ಲುಗಳ ಸಂಧಿಗಳಲ್ಲಿಯೂ ಮೊಟ್ಟೆ ಇಟ್ಟಿರುವುದನ್ನು ಗಮನಿಸಲಾಗಿದೆ. ಈ ಮೊಟ್ಟೆಗಳಿಗೆ ತಂದೆ-ತಾಯಿ ಹಕ್ಕಿಗಳೆರಡೂ ಸರತಿಯಂತೆ ಶಾಖ ಕೊಡುವುವು. ನಂತರ ಇಪ್ಪತ್ತೆಂಟರಿಂದ ಮೂವತ್ತು ದಿನಗಳಲ್ಲಿ ಮೊಟ್ಟೆಯೊಡೆದು ಮರಿ ಹೊರಬರುವುವು. ಬಿರುಬೇಸಿಗೆಯಲ್ಲಿ ಮರಿಗಳನ್ನು ಕಾಪಾಡಲು ಮತ್ತು ಪುಟ್ಟಮರಿಗಳನ್ನು ಸೂರ್ಯನ ಶಾಖದಿಂದ ರಕ್ಷಿಸಲು ತಾಯಿ ಹಕ್ಕಿಯು ತನ್ನ ಹೊಟ್ಟೆಯ ಗರಿಗಳನ್ನು ನೀರಿನಲ್ಲಿ ನೆನೆಸಿ ನಂತರ ಮೊಟ್ಟೆಯ ಮೇಲೆ ಕುಳಿತು ಅದನ್ನು ತಂಪು ಮಾಡುವುದೆಂದು ಹಾಗೂ ಚಿಕ್ಕ ಮರಿಗಳಿಗೆ ನೀರು ಉಣಿಸುವುದೆಂದು ತಿಳಿದು ಬಂದಿದೆ.

ಟಿಟ್ಟಿಭವು ನೆಲದ ಮೇಲೆ ಮೊಟ್ಟೆಯಿಡುವುದರಿಂದ ಮುಂಗುಸಿ, ಕಾಗೆ, ಹದ್ದುಗಳಂತಹ ಪರಭಕ್ಷಕಗಳ ಹಾವಳಿ ಬಹಳ ಇರುವುದು. ಇವುಗಳಿಂದ ತನ್ನ ಮರಿಗಳನ್ನು ಕಾಪಾಡಲು ತಂದೆ-ತಾಯಿ ಹಕ್ಕಿಗಳೆರಡು ತಮ್ಮ ರೆಕ್ಕೆಗಳನ್ನು ಬಿಚ್ಚಿ ಪ್ರದರ್ಶನ ಮಾಡುತ್ತಾ ಆಕ್ರಮಣಕಾರರ ಗಮನ ಬೇರೆಡೆ ಸೆಳೆಯುತ್ತದೆ ಎಂದು ವರದಿಯಾಗಿದೆ.

ಪೌರ್ಣಮಿಯ ರಾತ್ರಿಯಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿರುವ ಕೆಂಪು ಟಿಟ್ಟಿಭವು ಕೀಟಾಹಾರಿಯಾಗಿದ್ದು ಹಲವು ತರಹದ ಕೀಟ, ಹುಳು, ಬಸವನಹುಳು, ಗೆದ್ದಲುಹುಳು, ಮಿಡತೆ, ಚಿಟ್ಟೆ, ಇರುವೆ, ಜೀರುಂಡೆ, ಕಪ್ಪೆ ಚಿಪ್ಪಿನ ಹುಳುಗಳನ್ನು ತಿನ್ನುತ್ತದೆ. ಇದಲ್ಲದೇ, ಕಾಳು, ಬೀಜ ಹಾಗೂ ಸಸ್ಯಜನ್ಯ ಪದಾರ್ಥಗಳನ್ನು ಸಹ ಸೇವಿಸುವುದು. ಆಹಾರವನ್ನು ಮಣ್ಣಿನಲ್ಲಿ ಹುಡುಕಲು ಮತ್ತು ಹೆಕ್ಕಲು ಹಕ್ಕಿಯ ಬಲವಾದ, ಉದ್ದವಾದ ಕಾಲುಗಳು, ಚೂಪಾದ ಕೊಕ್ಕು ಕ್ರಮವಾಗಿ ನೆರವಾಗಿವೆ. ಈ ಹಕ್ಕಿಯು ರಾತ್ರಿ ಆಹಾರಾನ್ವೇಷಣೆ ಮಾಡಿದರೂ ಹಗಲಿನಲ್ಲಿಯೂ ಸಹ ಚಟುವಟಿಕೆಯಿಂದ ವಿಹರಿಸುತ್ತದೆ. ಹೀಗೆ, ಹಗಲು ರಾತ್ರಿ ಚೌಕಿದಾರನಂತೆ ತನ್ನ ಸುತ್ತಮುತ್ತಲಿನ ಸ್ಥಳದ ಆಗು-ಹೋಗುಗಳ ಮೇಲೆ ತೀವ್ರ ನಿಗಾ ಇರಿಸುತ್ತಾ ಯಾವುದೇ ರೀತಿಯ ಅಪಾಯದ ಮುನ್ಸೂಚನೆ ದೊರೆಯುತ್ತಿದ್ದಂತೆ ಜೋರಾಗಿ ಗಲಾಟೆ ಮಾಡಿ ತನ್ನ ಸಂಗಾತಿಗಳನ್ನು ಎಚ್ಚರಿಸುತ್ತಾ ಬೇಟೆಗಾರನಿಗೆ ತಲೆನೋವಾಗಿ ಪರಿಣಮಿಸಿದೆ. ಹಕ್ಕಿಗಳು ಮಾನವ ಕುಲದ ಜೊತೆಗೆ ಬೆಸೆದ ಬಾಂಧವ್ಯವು ಜನಪದ ಸಾಹಿತ್ಯದಲ್ಲಿ ಬಲು ಸ್ವಾರಸ್ಯವಾಗಿ ಮೂಡಿ ಬಂದಿದೆ. ಹಿಂದಿ ಭಾಷೆಯಲ್ಲಿ ‘ತಿತ್ತಿರಿ’ ಎಂದೇ ಹೆಸರಾಗಿರುವ ಟಿಟ್ಟಿಭವು ತನ್ನ ಮರಿಗಳ ಮೇಲೆ ಆಕಾಶ ಬೀಳುವುದೆಂದು ಬೆದರಿ ಅದನ್ನು ತಡೆಯಲು ತನ್ನ ಬೆನ್ನು ಭೂಮಿಗಾನಿಸಿ ಕಾಲು ಮೇಲಕ್ಕೆತ್ತಿ ಮಲಗುವುದೆಂಬ ಕಥೆಯು ಉತ್ತರಭಾರತದಲ್ಲಿ ಪ್ರಚಲಿತದಲ್ಲಿದೆ. ಅಂತೆಯೇ ‘ಆಕಾಶದ ಭಾರ ತಿತ್ತಿರಿ ತಡೆಯಬಲ್ಲುದೆ…?’ ಎಂಬ ನಾಡ್ನುಡಿಯು ಬಳಕೆಯಲ್ಲಿದೆ. ಎತ್ತರ ಪ್ರದೇಶದಲ್ಲಿ ಟಿಟ್ಟಿಭದ ಮೊಟ್ಟೆ ಕಂಡು ಬಂದರೆ ಉತ್ತಮ ಮಳೆಯ ಮುನ್ಸೂಚನೆ ಎಂದು ರಾಜಸ್ಥಾನದ ರೈತ ಬಾಂಧವರು ನಂಬಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನೀರಿನ ಪ್ರದೂಷಣೆಯಿಂದ, ನೈಸರ್ಗಿಕ ಅವಾಸಸ್ಥಾನಗಳ ನಾಶದಿಂದ, ನಗರೀಕರಣ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ನಡೆಯುತ್ತಿರುವ ಪ್ರಕೃತಿ ಮೇಲಿನ ದೌರ್ಜನ್ಯದಿಂದ ಟಿಟ್ಟಿಭಗಳಿಗೆ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಬೆಳೆಗಳಿಗೆ ಉಪದ್ರವಕಾರಿಯಾದ ಕೀಟ, ಹುಳು, ಮಿಡತೆ ಇತ್ಯಾದಿಗಳನ್ನು ತಿನ್ನುತ್ತಾ ಇವುಗಳನ್ನು ಹತೋಟಿಯಲ್ಲಿಡುತ್ತಾ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಈ ಹಕ್ಕಿಗಳು ಮಾನವನಿಗೆ ನೆರವಾಗಿವೆ. ಆದರೆ ನಾಟಿ ವೈದ್ಯ ಪದ್ಧತಿಯಲ್ಲಿ ಟಿಟ್ಟಿಭದ ಮೊಟ್ಟೆಗಳ ಬಳಕೆಯಿಂದ, ಕಳ್ಳಬೇಟೆ ಹಾಗೂ ಹಕ್ಕಿಗಳ ಅನೈತಿಕ ಮಾರಾಟದಿಂದ ಇವುಗಳ ಜೀವಕ್ಕೆ ಕುತ್ತು ಬಂದಿದೆ.